ಅಧ್ಯಾಯ ೪: ನಾಮಪದ ಪ್ರಕರಣ (ನಾಮಪದ-ನಾಮಪ್ರಕೃತಿ-ನಾಮವಿಭಕ್ತಿ ಪ್ರತ್ಯಯ): ಭಾಗ VII – ವಿಭಕ್ತಿಪಲ್ಲಟ
(೫೩) ನಾವು ಮಾತಾನಾಡುವಾಗ ಶಬ್ದಗಳಿಗೆ ಪ್ರಕೃತಿಗಳಿಗೆ ಯಾವಯಾವ ವಿಭಕ್ತಿಪ್ರತ್ಯಯಗಳನ್ನು ಹಚ್ಚಿ ಹೇಳಬೇಕೋ ಅದನ್ನು ಬಿಟ್ಟು ಬೇರೆ ವಿಭಕ್ತಿಪ್ರತ್ಯಯಗಳನ್ನು ಹಚ್ಚಿ ಹೇಳುವುದುಂಟು. ಹೀಗೆ ಬರಬೇಕಾದ ವಿಭಕ್ತಿಪ್ರತ್ಯಯಕ್ಕೆ ಪ್ರತಿಯಾಗಿ ಬೇರೊಂದು ವಿಭಕ್ತಿಪ್ರತ್ಯಯ ಬರುವಂತೆ ಹೇಳುವುದೇ ವಿಭಕ್ತಿ ಪಲ್ಲಟ ವೆನಿಸುವುದು.
ಉದಾಹರಣೆಗೆ:-
(ಅ) (i) ಬಂಡಿಯನ್ನು ಹತ್ತಿದನು.
(ii) ಊರನ್ನು ಸೇರಿದನು.
(iii) ಬೆಟ್ಟವನ್ನು ಹತ್ತಿದನು.
ಹೀಗೆ ದ್ವಿತೀಯಾ ವಿಭಕ್ತಿಯನ್ನು ಸೇರಿಸಿ ಹೇಳಬೇಕಾದ ಕಡೆಗಳಲ್ಲಿ-
(i) ಬಂಡಿಗೆ ಹತ್ತಿದನು.
(ii) ಊರಿಗೆ ಸೇರಿದನು.
(iii) ಬೆಟ್ಟಕ್ಕೆ ಹತ್ತಿದನು.
ಹೀಗೆ ಚತುರ್ಥೀವಿಭಕ್ತಿಯನ್ನು ಸೇರಿಸಿ ಹೇಳುವುದು ವಾಡಿಕೆ. ಆದ್ದರಿಂದ ಇಲ್ಲಿ ದ್ವಿತೀಯಾರ್ಥದಲ್ಲಿ ಚತುರ್ಥೀವಿಭಕ್ತಿ ಬಂದಿದೆಯೆಂದು ತಿಳಿಯಬೇಕು.
(ಆ) (i) ಮರದ ದೆಸೆಯಿಂದ ಹಣ್ಣು ಉದುರಿತು.
(ii) ಆತನ ದೆಸೆಯಿಂದ ಕೇಡಾಯಿತು.
ಹೀಗೆ ಪಂಚಮೀವಿಭಕ್ತಿ ಬರುವೆಡೆಗಳಲ್ಲಿ-
(i) ಮರದಿಂದ ಹಣ್ಣು ಉದುರಿತು.
(ii) ಆತನಿಂದ ಕೇಡಾಯಿತು.
ಇತ್ಯಾದಿ ತೃತೀಯಾವಿಭಕ್ತಿಯನ್ನು ಸೇರಿಸಿ ಹೇಳುವುದುಂಟು. ಆದ್ದರಿಂದ ಇದನ್ನು ಪಂಚಮೀ ಅರ್ಥದಲ್ಲಿ ತೃತೀಯಾವಿಭಕ್ತಿ ಪಲ್ಲಟವಾಗಿದೆಯೆಂದು ತಿಳಿಯಬೇಕು.
(ಇ) (i) ಮನೆಯ ಯಜಮಾನ.
(ii) ನಮ್ಮ ಉಪಾಧ್ಯಾಯರು.
ಹೀಗೆ ಷಷ್ಠೀವಿಭಕ್ತಿಯು ಬರಬೇಕಾದೆಡೆಯಲ್ಲಿ-
(i) ಮನೆಗೆ ಯಜಮಾನ.
(ii) ನಮಗೆ ಉಪಾಧ್ಯಾಯರು.
ಇತ್ಯಾದಿ ಚತುರ್ಥೀವಿಭಕ್ತಿಯನ್ನು ಸೇರಿಸಿ ಹೇಳುವುದುಂಟು. ಆದುದರಿಂದ ಇದನ್ನು ಷಷ್ಠೀ ಅರ್ಥದಲ್ಲಿ ಚತುರ್ಥೀವಿಭಕ್ತಿ ಪಲ್ಲಟವಾಗಿ ಬಂದಿದೆಯೆಂದು ತಿಳಿಯಬೇಕು.
(ಉ) (i) ಹಳ್ಳದಲ್ಲಿ ಬಿದ್ದನು.
(ii) ಅವನಲ್ಲಿ ಸಾಮರ್ಥ್ಯವಿಲ್ಲ.
ಹೀಗೆ ಸಪ್ತಮೀವಿಭಕ್ತಿ ಬರಬೇಕಾದ ಕಡೆಗಳಲ್ಲಿ-
(i) ಹಳ್ಳಕ್ಕೆ ಬಿದ್ದನು.
(ii) ಅವನಿಗೆ ಸಾಮರ್ಥ್ಯವಿಲ್ಲ.
ಇತ್ಯಾದಿ ಪಂಚಮೀವಿಭಕ್ತ್ಯಂತವಾಗಿ ಹೇಳುವುದು ವಾಡಿಕೆ. ಇದನ್ನು ಸಪ್ತಮೀ ಅರ್ಥದಲ್ಲಿ ಪಂಚಮೀವಿಭಕ್ತಿ ಪಲ್ಲಟವೆಂದು ತಿಳಿಯಬೇಕು.
ಅಧ್ಯಾಯ ೪: ನಾಮಪದ ಪ್ರಕರಣ (ನಾಮಪದ-ನಾಮಪ್ರಕೃತಿ-ನಾಮವಿಭಕ್ತಿ ಪ್ರತ್ಯಯ): ಭಾಗ VIII – ಸಾರಾಂಶ
ನಾಮಪ್ರಕೃತಿಗಳು
|
|
ಸಹಜನಾಮ ಪ್ರಕೃತಿ
|
ಸಾಧಿತನಾಮ ಪ್ರಕೃತಿ
|
(i) ವಸ್ತುಗಳ ಹೆಸರು ಹೇಳುವ ವಸ್ತುವಾಚಕಗಳು
|
(i) ಕೃದಂತ
|
(ii) ವಸ್ತುಗಳ ಗುಣವನ್ನು ಹೇಳುವ ಗುಣವಾಚಕಗಳು
|
(ii) ತದ್ಧಿತಾಂತ
|
(iii) ಸಂಖ್ಯಾವಾಚಕಗಳು
|
(iii) ಸಮಾಸಗಳು
|
(iv) ಸಂಖ್ಯೇಯವಾಚಕಗಳು
|
|
(v) ಪರಿಮಾಣವಾಚಕಗಳು
|
|
(vi) ಪ್ರಕಾರವಾಚಕಗಳು
|
|
(vii) ದಿಗ್ವಾಚಕಗಳು
|
|
(viii) ಭಾವನಾಮಗಳು
|
|
(ix) ಸರ್ವನಾಮಗಳು
|
ಮೇಲಿನ ಈ ೯ ತರದ ಸಹಜನಾಮ ಪ್ರಕೃತಿಗಳಿಗೂ, ಸಾಧಿತಗಳಾದ ಕೃದಂತ, ತದ್ಧಿತಾಂತ, ಸಮಾಸ ನಾಮಪ್ರಕೃತಿಗಳ ಮೇಲೂ ನಾಮವಿಭಕ್ತಿ ಪ್ರತ್ಯಯಗಳು ಸೇರಿ ನಾಮಪದಗಳೆನಿಸುತ್ತವೆ. ಇವುಗಳಿಗೆ ಲಿಂಗ ವಚನಗಳೂ ಉಂಟು.
ನಾಮಪದಗಳು
ಲಿಂಗ
|
ವಚನ
|
ವಿಭಕ್ತಿಗಳು
|
(i) ಪುಲ್ಲಿಂಗ
|
(i) ಏಕವಚನ (ಒಂದು ವಸ್ತು)
|
(i) ಪ್ರಥಮಾ (ಉ)
|
(ii) ಸ್ತ್ರೀಲಿಂಗ
|
(ii) ಬಹುವಚನ (ಒಂದಕ್ಕಿಂತ ಹೆಚ್ಚು ವಸ್ತು)
|
(ii) ದ್ವಿತೀಯಾ (ಅನ್ನು)
|
(iii) ನಪುಂಸಕಲಿಂಗ
|
(iii) ತೃತೀಯಾ (ಇಂದ)
|
|
(iv) ಪುನ್ನಪುಂಸಕಲಿಂಗ
|
(iv) ಚತುರ್ಥೀ (ಗೆ, ಇಗೆ, ಕ್ಕೆ, ಅಕ್ಕೆ)
|
|
(v) ಸ್ತ್ರೀನಪುಂಸಕಲಿಂಗ
|
(v) ಪಂಚಮೀ (ದೆಸೆಯಿಂದ)
|
|
(vi) ವಾಚ್ಯಲಿಂಗ (ವಿಶೇಷ್ಯಾಧೀನಲಿಂಗ)
|
(vi) ಷಷ್ಠೀ (ಅ)
|
|
(vii) ಸಪ್ತಮೀ (ಅಲ್ಲಿ, ಅಲಿ, ಒಳು, ಎ)
|
||
(viii) ಸಂಬೋಧನಾ (ಆ, ಏ, ಇರಾ, ಈ)
|
(ಅ) ಮೇಲೆ ಹೇಳಿದ ಎಲ್ಲ ವಿಭಕ್ತಿಪ್ರತ್ಯಯಗಳು ಪ್ರಕೃತಿಗಳ ಮೇಲೆ ಸೇರುವಾಗ ಆಗುವ ರೂಪಾಂತರಗಳು:- ಮುಖ್ಯವಾಗಿ ದ, ವ, ನ, ಇನ, ಅರ ಆಗಮಗಳು ಏಕವಚನದಲ್ಲೂ,
(ಆ) ಬಹುವಚನದಲ್ಲಿ-ಗಳು, ಅರು, ಅರುಗಳು, ಅಂದಿರು, ಅಂದಿರುಗಳು, ಇರು, ವಿರು, ವು, ಅವು, ಕಳು, ವರು-ಇತ್ಯಾದಿಗಳೂ ಬರುತ್ತವೆ.
(ಇ) ಮುಖ್ಯವಾದ ಕೆಲವು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಪ್ರಕೃತಿಗಳು ವಿಭಕ್ತಿಪ್ರತ್ಯಯ ಸೇರಿ ಯಾವ ರೂಪ ಪಡೆಯುತ್ತವೆಂಬ ಬಗೆಗೆ ತಿಳಿದಿದ್ದೀರಿ.
(ಈ) ಪ್ರಯೋಗ ವಿಧಾನದಲ್ಲಿ ಯಾವ ಯಾವ ಅರ್ಥದಲ್ಲಿ ವಿಭಕ್ತಿಪ್ರತ್ಯಯಗಳು ಪ್ರಕೃತಿಯ ಮೇಲೆ ಸೇರುತ್ತವೆಂಬ ಬಗೆಗೆ ತಿಳಿದಿದ್ದೀರಿ.
(ಉ) ವಿಭಕ್ತಿ ಪ್ರತ್ಯಯಗಳು ಪಲ್ಲಟವಾಗಿ ಬೇರೆಬೇರೆ ಅರ್ಥಗಳಲ್ಲಿ ಹೇಗೆ ಸೇರುತ್ತವೆಂಬುದನ್ನು ತಿಳಿದಿದ್ದೀರಿ.
ಅಧ್ಯಾಯ ೪: ನಾಮಪದ ಪ್ರಕರಣ (ನಾಮಪದ-ನಾಮಪ್ರಕೃತಿ-ನಾಮವಿಭಕ್ತಿ ಪ್ರತ್ಯಯ): ಅಭ್ಯಾಸ ಪ್ರಶ್ನೆಗಳು
(೧) ಅಪ್ಪಾ, ನನಗೆ ತಪಸ್ಸಿನ ಮೇಲೆ ಮನಸ್ಸಾಗಿದೆ. ಈ ವಯಸ್ಸಿನಲ್ಲಿ ಅರಣ್ಯವಾಸವು ನಮ್ಮ ಕುಲಕ್ಕೆ ಬಂದದ್ದು. ನಾನೂ ಬೇಕಾದಷ್ಟು ಕಾಲ ನಿಮ್ಮೊಡನೆ ಇದ್ದೆನು. -ಈ ವಾಕ್ಯಗಳಲ್ಲಿ ಬಂದಿರುವ ಸರ್ವನಾಮ ಶಬ್ದಗಳಾವುವು?
(೨) ವಸ್ತುವಾಚಕ, ಗುಣವಾಚಕ, ಶಬ್ದಗಳೆಂದರೇನು? ಹತ್ತು ಹತ್ತು ಶಬ್ದಗಳ ಪಟ್ಟಿ ಮಾಡಿರಿ.
(೩) ಉತ್ತರ, ಮಾಡಲು, ಅತ್ತ, ಅವನು, ಕುರುಡ, ಕಲ್ಲು, ಅಷ್ಟು, ಅಂಥ, ಮೂರನೆಯ – ಈ ಪ್ರಕೃತಿಗಳು ಯಾವ ಯಾವ ಗುಂಪಿಗೆ ಸೇರುವ ನಾಮಪ್ರಕೃತಿಗಳು?
(೪) ಜನ, ಮಗು, ಕೋಣ, ಸೂರ್ಯ, ಶನಿ, ನಾನು, ನೀನು-ಈ ಪ್ರಕೃತಿಗಳು ಯಾವ ಯಾವ ಲಿಂಗಗಳು?
(೫) ಮನೆಯನ್ನು, ದೇವರಲ್ಲಿ, ಪುಸ್ತಕವು, ಕಲ್ಲಿಗೆ, ಹುಲಿಯದೆಸೆಯಿಂದ, ದೇವರೇ, ಮಕ್ಕಳಿರಾ, ಮಂಚದಿಂದ, ನೆಲಕ್ಕೆ, ಗುರುವಿಗೆ-ಈ ಪದಗಳ ಪ್ರಕೃತಿ ಪ್ರತ್ಯಯಗಳನ್ನು ಬಿಡಿಸಿ ಬರೆದು ಆ ಪ್ರತ್ಯಯಗಳು ಯಾವ ವಿಭಕ್ತಿಗಳು? ಅವುಗಳ ಅರ್ಥವೇನು ತಿಳಿಸಿರಿ.
(೬) ತಮ್ಮಂದಿರು, ಅಕ್ಕಂದಿರುಗಳು, ತಾಯಿಯರು, ಈ ಪದಗಳಲ್ಲಿರುವ ಪ್ರಕೃತಿ-ಪ್ರತ್ಯಯ-ಆಗಮಗಳು ಯಾವುವೆಂಬುದನ್ನು ಬಿಡಿಸಿ ಬರೆದು ತೋರಿಸಿರಿ.
(೭) (ಅ) ರಾಮ-ಕಾಡು ಒಂದು ಪರ್ಣಶಾಲೆ-ಕಟ್ಟಿಕೊಂಡು ವಾಸಿಸುತ್ತಿದ್ದನು. (ಆ) ಮೀನು-ನೀರು-ವಾಸಮಾಡುತ್ತದೆ. – ಮೇಲಿನ ಈ ಎರಡೂ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ನಾಮಪ್ರಕೃತಿಗಳಿಗೆ ಯಾವ ವಿಭಕ್ತಿ ಪ್ರತ್ಯಯಗಳನ್ನು ಹಚ್ಚಿದರೆ, ವಾಕ್ಯವು ಅರ್ಥವತ್ತಾಗುವುದು? ವಿಭಕ್ತಿಪ್ರತ್ಯಯವನ್ನು ಸೇರಿಸಿ ಬರೆಯಿರಿ.
(೮) (ಅ) ಅವನು ಮನೆ ಇಲ್ಲ (ಆ) ತಾಯಿ ದೇವರು ತಿಳಿ. -ಇವನ್ನು ಅರ್ಥಪೂರ್ಣವಾದ ವಾಕ್ಯಗಳನ್ನಾಗಿ ಮಾಡಿರಿ.
(೯) ಕೆಳಗಿನ ಪದಗಳ ಮುಂದೆ ಬಿಟ್ಟಿರುವ ಸ್ಥಳದಲ್ಲಿ ಮುಂದೆ ಆವರಣದಲ್ಲಿ ಕೊಟ್ಟಿರುವ ಒಂದು ಸರಿಯಾದ ಉತ್ತರವನ್ನು ಹುಡುಕಿ ಬರೆಯಿರಿ.
(i) ನಾನು ಎಂಬುದು (ವಾಚ್ಯಲಿಂಗ, ನಪುಂಸಕಲಿಂಗ, ಪುಲ್ಲಿಂಗ)
(ii) ಅವನು ಎಂಬುದು (ಗುಣವಾಚಕ, ಭಾವನಾಮ, ಸರ್ವನಾಮ)
(iii) ಮಕ್ಕಳಿರಾ, ಎಂಬುದು (ಚತುರ್ಥೀವಿಭಕ್ತಿ, ತೃತೀಯಾವಿಭಕ್ತಿ, ಸಂಬೋಧನಾ ವಿಭಕ್ತ್ಯಂತ ಪದ)
(iv) ಅತ್ತ ಎಂಬುದು (ಪರಿಮಾಣವಾಚಕ, ದಿಗ್ವಾಚಕ, ಸರ್ವನಾಮ)
(v) ಕೊಡಲಿಯಿಂದ ಎಂಬ ಪದವು (ಪಂಚಮೀ, ತೃತೀಯಾ, ಸಪ್ತಮೀ ವಿಭಕ್ತ್ಯಂತವಾಗಿದೆ)
(vi) ಸಂಪ್ರದಾನಾರ್ಥದಲ್ಲಿ (ತೃತೀಯಾ, ಚತುರ್ಥೀ, ಪಂಚಮೀವಿಭಕ್ತಿ ಬರುವುದು)
(vii) ಸರಸ್ವತಿ ಒಲಿದಳು. ಇಲ್ಲಿ ಸರಸ್ವತಿ ಎಂಬ ಪ್ರಕೃತಿಯು (ನಪುಂಸಕಲಿಂಗ, ಸ್ತ್ರೀಲಿಂಗ, ಸ್ತ್ರೀನಪುಂಸಕಲಿಂಗ)
(viii) ಹೂವಾಡಗಿತ್ತಿ ಎಂಬುದು (ಸ್ತ್ರೀಲಿಂಗ, ನಪುಂಸಕಲಿಂಗ, ಪುಲ್ಲಿಂಗ)
(ix) ಹುಡುಗ ಎಂಬುದು (ವಾಚ್ಯಲಿಂಗ, ನಪುಂಸಕಲಿಂಗ, ಪುಲ್ಲಿಂಗ)
(x) ಹುಡುಗಿ ಎಂಬುದು (ಅಂಕಿತನಾಮ, ಅನ್ವರ್ಥನಾಮ, ರೂಢನಾಮ)
(೧೦) ಕೆಳಗಿನ ವಾಕ್ಯಗಳಲ್ಲಿ ತಪ್ಪುಗಳಿವೆ. ಅವನ್ನು ತಿದ್ದಿ ಸರಿಪಡಿಸಿರಿ:-
(i) ನಾನು, ನಾವು, ನೀನು, ನೀವು-ಎಂಬುವು ಪುಲ್ಲಿಂಗಗಳು.
(ii) ಪದಕ್ಕೆ ಪ್ರತ್ಯಯ ಸೇರಿ ಪದವೆನಿಸುವುದು.
(iii) ಕರ್ತರಿ ಪ್ರಯೋಗದಲ್ಲಿ ಕರ್ಮಾರ್ಥದಲ್ಲಿ ಪ್ರಥಮಾವಿಭಕ್ತಿ ಬರುವುದು.
(iv) ಧಾತುಗಳಮೇಲೆ ನಾಮ ವಿಭಕ್ತಿಪ್ರತ್ಯಯಗಳು ಸೇರಿ ನಾಮಪದಗಳೆನಿಸುವುವು.
(v) ಅವನು, ಅವಳು, ಅದು, ಅವು-ಇವು ಮಧ್ಯಮ ಪುರುಷ ಸರ್ವನಾಮಗಳು.
(vi) ನಾಮಪದದ ಮೂಲರೂಪಕ್ಕೆ ಕ್ರಿಯಾಪ್ರಕೃತಿಯೆನ್ನುವರು.
(vii) ಸಂಬೋಧನೆಯಲ್ಲಿ ಬರುವ ಕೊನೆಯ ಸ್ವರವು ದೀರ್ಘಸ್ವರವೆನಿಸುವುದು.
(viii) ಪ್ಲುತಸ್ವರವೆಂದರೆ ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರ.
(ix) ಜನ ಶಬ್ದವು ಪುಲ್ಲಿಂಗ.
(x) ಸೂರ್ಯ ಶಬ್ದವು ನಪುಂಸಕಲಿಂಗ.
No comments:
Post a Comment