ಅಧ್ಯಾಯ ೧: ಸಂಜ್ಞಾ ಪ್ರಕರಣ ಸಂಜ್ಞೆಗಳು: ಭಾಗ IV – ಗುಣಿತಾಕ್ಷರಗಳು
ವ್ಯಂಜನಾಕ್ಷರಗಳನ್ನು ದ್ ವ್ ರ್ ಹೀಗೆ ಬರೆದು ಅರ್ಥವತ್ತಾದ ಶಬ್ದಗಳನ್ನು ಮಾಡಲಾಗುವುದೇ ಇಲ್ಲ. ಅವುಗಳಿಗೆಲ್ಲ ಸ್ವರಗಳು ಸೇರಲೇ ಬೇಕು. ದ್+ಏ=ದೇ, ವ್+ಅ=ವ, ರ್+ಉ=ರು - ಹೀಗೆ ಸ್ವರಗಳನ್ನು ಸೇರಿಸಿದ ಮೇಲೆಯೇ ದೇವರು ಎಂದು ಉಚ್ಚಾರ ಮಾಡಲು ಬರುತ್ತವೆ. ಅಥವಾ ಹಿಂದೆ ಸ್ವರವಿದ್ದರೆ ಅದ್, ಅರ್ ಎನ್ನಬಹುದು. ಈ ವಿಷಯವನ್ನು ಹಿಂದೆ ತಿಳಿಸಿದೆ. ದೇವರು ಎಂದಾಗ ಅದರಲ್ಲಿರುವ ದ್ ಏ ವ್ ಅ ರ್ ಉ ವ್ಯಂಜನ ಸ್ವರಗಳನ್ನು ಬಿಡಿಬಿಡಿಯಾಗಿ ಬರೆಯುವುದಿಲ್ಲ. ವ್ಯಂಜನದಲ್ಲಿ ಸ್ವರವನ್ನು ಸೇರಿಸಿ ಒಂದು ಹೊಸ ಆಕಾರದ ಅಕ್ಷರವನ್ನು ಮಾಡಿ ಬರೆಯುತ್ತೇವೆ. ಕೆಳಗೆ ಕೊಟ್ಟಿರುವ ಪಟ್ಟಿಯನ್ನು ನೋಡಿರಿ:-
ವ್ಯಂಜನ
|
ಸ್ವರ
|
ಗುಣಿತಾಕ್ಷರ
|
||
ಕ್
|
+
|
ಅ
|
=
|
ಕ
|
ಕ್
|
+
|
ಆ
|
=
|
ಕಾ
|
ಚ್
|
+
|
ಇ
|
=
|
ಚಿ
|
ಚ್
|
+
|
ಈ
|
=
|
ಚೀ
|
ತ್
|
+
|
ಉ
|
=
|
ತು
|
ತ್
|
+
|
ಊ
|
=
|
ತೂ
|
ಟ್
|
+
|
ಎ
|
=
|
ಟೆ
|
ಟ್
|
+
|
ಏ
|
=
|
ಟೇ
|
ಪ್
|
+
|
ಐ
|
=
|
ಪೈ
|
ಪ್
|
+
|
ಒ
|
=
|
ಪೊ
|
ಬ್
|
+
|
ಓ
|
=
|
ಬೋ
|
ಬ್
|
+
|
ಔ
|
=
|
ಬೌ
|
ಕ್
|
+
|
ಋ
|
=
|
ಕೃ
|
ಬ್
|
+
|
ೠ
|
=
|
ಬೄ
|
ಇದರಂತೆ ಎಲ್ಲಾ ಸ್ವರಗಳನ್ನೂ (೧೪ ಸ್ವರಗಳನ್ನೂ) ೩೪ ವ್ಯಂಜನಗಳಲ್ಲಿಯೂ ಸೇರಿಸಿ ಹೊಸ ಆಕಾರದ ಅಕ್ಷರಗಳನ್ನು ಮಾಡಿಕೊಳ್ಳುತ್ತೇವೆ. ಇವೇ ಗುಣಿತಾಕ್ಷರಗಳೆಂದು ಕರೆಯಿಸಿಕೊಳ್ಳುತ್ತವೆ.
[1] ರೂಢಿಯಲ್ಲಿ ಕಾಗುಣಿತ ಎನ್ನುವುದುಂಟು. ಕಾಗುಣಿತ ಎಂದರೆ ಕ್+ಅ=ಕ, ಕ್+ಆ=ಕಾ, ಕ್+ಇ=ಕಿ, ಹೀಗೆ ಕಕಾರದಲ್ಲಿ ಹದಿನಾಲ್ಕು ಸ್ವರಗಳೂ ಸೇರಿದ ಮೇಲೆ ಆಗುವ ಕ ಕಾ ಕಿ ಕೀ ಎಂಬ ಹದಿನಾಲ್ಕು ಗುಣಿತಾಕ್ಷರಗಳೇ ಕಾಗುಣಿತಗಳು. ಇವಕ್ಕೆ ಬಳ್ಳಿ ಎಂದೂ ಕರೆಯುವರು.
ಅಧ್ಯಾಯ ೧: ಸಂಜ್ಞಾ ಪ್ರಕರಣ ಸಂಜ್ಞೆಗಳು: ಭಾಗ V – ಸಂಯುಕ್ತಾಕ್ಷರಗಳು (ಒತ್ತಕ್ಷರಗಳು)
(೧) ’ಅಕ್ಕ’ ಎಂಬ ಶಬ್ದದಲ್ಲಿ ಯಾವ ಯಾವ ಅಕ್ಷರಗಳಿವೆ ಎಂಬುದನ್ನು ನೋಡಿರಿ. ಅ + ಕ್ + ಕ್ + ಅ – ಹೀಗೆ ನಾಲ್ಕು ಅಕ್ಷರಗಳು ಕೂಡಿ ’ಅಕ್ಕ’ ಶಬ್ದವಾಗಿದೆಯಲ್ಲವೆ? ಇದರ ಹಾಗೆಯೇ ಅಣ್ಣ ಎಂಬಲ್ಲಿ, ಅ + ಣ್ + ಣ್ + ಅ ಎಂಬ ನಾಲ್ಕಕ್ಷರಗಳು ಸೇರಿ ಅಣ್ಣ ಶಬ್ದವಾಗಿದೆ. ಕ್ಕ ಎಂದರೆ = ಕ್ + ಕ್ + ಅ; ಣ್ಣ ಎಂದರೆ = ಣ್ + ಣ್ + ಅ. ಇಲ್ಲಿ ಎರಡೆರಡು ವ್ಯಂಜನ ಸೇರಿಕೊಂಡು ಒಂದಕ್ಷರವಾಗಿದೆ. ಈ ಎರಡೂ ವ್ಯಂಜನಗಳು ಒಂದೇ ಜಾತಿಯವು ಎಂದರೆ ಸಜಾತೀಯ ವ್ಯಂಜನಗಳು.
(೧೩) ಒಂದೇ ಜಾತಿಯ (ಸಜಾತೀಯ) ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರವು ಸಜಾತೀಯ ಸಂಯುಕ್ತಾಕ್ಷರವೆನಿಸುವುದು[1]. ಇದಕ್ಕೆ ದ್ವಿತ್ವವೆಂದೂ ಹೆಸರು[2].
ಉದಾಹರಣೆಗೆ:-
ಅಕ್ಕ (ಕ್ + ಕ್)
ಅಣ್ಣ (ಣ್ + ಣ್)
ಅಜ್ಜ (ಜ್ + ಜ್)
ಕೆಟ್ಟು (ಟ್ + ಟ್)
ಹುತ್ತ (ತ್ + ತ್)
(೨) ’ಭಕ್ತ’ ಎಂಬ ಶಬ್ದದಲ್ಲಿ ಭ್+ಅ+ಕ್+ತ್+ಅ ಎಂಬ ಐದು ಅಕ್ಷರಗಳಿವೆ. ’ಅಷ್ಟು’ ಎಂಬ ಶಬ್ದದಲ್ಲಿ ಅ+ಷ್+ಟ್+ಉ ಎಂಬ ನಾಲ್ಕು ಅಕ್ಷರಗಳಿವೆ. ’ಸ್ತ್ರೀ’ ಎಂಬ ಶಬ್ದದಲ್ಲಿ ’ಸ್+ತ್+ರ್+ಈ’ ಎಂಬ ನಾಲ್ಕು ಅಕ್ಷರಗಳಿವೆ. ಮೇಲಿನ ಈ ಉದಾಹರಣೆಗಳಲ್ಲಿ ಎರಡೆರಡು ಮೂರುಮೂರು ವ್ಯಂಜನಗಳು ಸೇರಿ ಒಂದೊಂದು ಅಕ್ಷರಗಳಾಗಿವೆ. ಆದರೆ ಹೀಗೆ ಇಲ್ಲಿ ಸೇರಿರುವ ವ್ಯಂಜನಗಳು ಬೇರೆಬೇರೆ ಜಾತಿಯವು, ಎಂದರೆ ವಿಜಾತೀಯ ವ್ಯಂಜನಗಳು.
’ಷ್ಟು’ ಎಂಬುದು ಷ್+ಟ್ ಎಂಬ ವ್ಯಂಜನಗಳಿಂದಲೂ, ’ಕ್ತ’ ಎಂಬುದು ಕ್+ತ್ ಎಂಬ ವ್ಯಂಜನಗಳಿಂದಲೂ, ’ಸ್ತ್ರೀ’ ಎಂಬುದು ಸ್+ತ್+ರ್ ಎಂಬ ವ್ಯಂಜನಗಳಿಂದಲೂ ಸೇರಿ ಆಗಿರುವ ಸಂಯುಕ್ತಾಕ್ಷರ (ಒತ್ತಕ್ಷರ)ವಾಗಿದೆ.
(೧೪) ಬೇರೆಬೇರೆ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು ಸೇರಿ ಆಗುವ ಅಕ್ಷರಕ್ಕೆ ವಿಜಾತೀಯ ಸಂಯುಕ್ತಾಕ್ಷರ ಎನ್ನುತ್ತಾರೆ.
ಉದಾಹರಣೆಗೆ:-
ವಸ್ತ್ರ
|
(ಸ್ + ತ್ + ರ್)
|
ಅಕ್ಷರ
|
(ಕ್ + ಷ್)
|
ಜ್ಞಾನ
|
(ಜ್ + ಞ)
|
ಸ್ವಾರ್ಥ
|
(ಸ್ + ವ್; ರ್ + ಥ್)
|
ಶಕ್ತಿ
|
(ಕ್ + ತ್)
|
[1] ಸಂಯುಕ್ತ ಎಂದರೆ ಚೆನ್ನಾಗಿ ಸೇರಿಸಿದ ಎಂದು ಅರ್ಥ. ಎರಡು ವ್ಯಂಜನಗಳು ಮಧ್ಯದಲ್ಲಿ ಯಾವ ಕಾಲ ವಿಳಂಬವೂ ಇಲ್ಲದೆ ಸೇರುವುದೇ ಸಂಯುಕ್ತಾಕ್ಷರವೆನಿಸುವುದು. (ಸಂ=ಚೆನ್ನಾಗಿ), (ಯುಕ್ತ=ಸೇರಿದ)
[2] ದ್ವಿತ್ವ ಎಂದು ಒಂದೇ ಜಾತಿಯ ಎರಡು ವ್ಯಂಜನಗಳು ಸೇರುವುದಕ್ಕೆ ಮಾತ್ರ ಕರೆಯಲಾಗುವುದು. ಬೇರೆಬೇರೆ ಜಾತಿಯ ವ್ಯಂಜನ ಸೇರಿದರೆ ದ್ವಿತ್ವ ಎನಿಸಿಕೊಳ್ಳುವುದಿಲ್ಲ.
ಅಧ್ಯಾಯ ೧: ಸಂಜ್ಞಾ ಪ್ರಕರಣ ಸಂಜ್ಞೆಗಳು: ಭಾಗ VI – ಯಾವ ಯಾವ ಅಕ್ಷರಗಳು ಎಲ್ಲೆಲ್ಲಿ (ಯಾವ ಯಾವ ಸ್ಥಾನದಲ್ಲಿ) ಹುಟ್ಟುತ್ತವೆ?
ಇದುವರೆಗೆ ೫೦ ಅಕ್ಷರಗಳ ಬಗೆಗೆ ವಿವರವಾಗಿ ತಿಳಿದಿದ್ದೀರಿ. ಈ ಅಕ್ಷರಗಳೆಲ್ಲ ಹೊಕ್ಕಳದ ಮೂಲ ಭಾಗದಿಂದ ಹೊರಟ ಶಬ್ದವೊಂದರಿಂದ ಹುಟ್ಟುತ್ತವೆ. ಹಾಗೆ ಹೊರಟ ಶಬ್ದವು ಗಂಟಲು, ದವಡೆ, ಮೂರ್ಧ (ನಾಲಗೆಯ ಮೇಲ್ಭಾಗದ ಭಾಗ), ತುಟಿ, ಹಲ್ಲು – ಇತ್ಯಾದಿ ಅವಯವಗಳ ಸಹಾಯದಿಂದ ಬೇರೆ ಬೇರೆ ಅಕ್ಷರಗಳಾಗುತ್ತವೆ. ಹಾಗಾದರೆ ಯಾವ ಯಾವ ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತವೆ? ಎಂಬ ಬಗೆಗೆ ಈ ಕೆಳಗಿನ ವಿವರಣೆಯನ್ನು ನೋಡಿರಿ:-
(೧) ಅ, ಆ, ಕ, ಖ, ಗ, ಘ, ಙ, ಹ ಮತ್ತು ವಿಸರ್ಗ (ಃ) – ಇವು ಕಂಠದಲ್ಲಿ ಹುಟ್ಟುತ್ತವಾದ್ದರಿಂದ ಇವನ್ನು ಕಂಠ್ಯ ವರ್ಣಗಳೆನ್ನುತ್ತಾರೆ.
(೨) ಇ, ಈ, ಚ, ಛ, ಜ, ಝ, ಞ, ಯ, ಶ - ಇವುಗಳು ತಾಲುವಿನ (ದವಡೆಯ) ಸಹಾಯದಿಂದ ಹುಟ್ಟುತ್ತವಾದ್ದರಿಂದ ಇವನ್ನು ತಾಲ್ವಕ್ಷರಗಳೆನ್ನುವರು.
(೩) ಋ, ೠ, ಟ, ಠ, ಡ, ಢ, ಣ, ರ, ಷ - ಅಕ್ಷರಗಳು ನಾಲಗೆಯ ಮೇಲ್ಭಾಗವಾದ ಮೂರ್ಧವೆಂಬುದರ ಸಹಾಯದಿಂದ ಹುಟ್ಟುತ್ತವೆ. ಆದುದರಿಂದ ಇವು ಮೂರ್ಧನ್ಯಗಳೆನಿಸುವುವು.
(೪) ತ, ಥ, ದ, ಧ, ನ, ಲ, ಸ - ಅಕ್ಷರಗಳು ಹಲ್ಲುಗಳ ಸಹಾಯದಿಂದ ಹುಟ್ಟುತ್ತವಾದ್ದರಿಂದ ಇವು ದಂತ್ಯ ವರ್ಣಗಳೆನಿಸುವುವು. (ದಂತ=ಹಲ್ಲು)
(೫) ಉ, ಊ, ಪ, ಫ, ಬ, ಭ, ಮ - ಅಕ್ಷರಗಳು ತುಟಿಯ (ಓಷ್ಠದ) ಸಹಾಯದಿಂದ ಹುಟ್ಟುತ್ತವಾದ್ದರಿಂದ ಇವನ್ನು ಓಷ್ಠ್ಯ ವರ್ಣಗಳೆನ್ನುವರು.
(೬) ಙ, ಞ, ಣ, ನ, ಮ - ವರ್ಣಗಳು ನಾಸಿಕದ ಸಹಾಯದಿಂದ ಹುಟ್ಟುತ್ತವಾದ್ದರಿಂದ ಇವು ನಾಸಿಕಗಳು (ಅನುನಾಸಿಕಗಳು) ಎನಿಸುವುವು.
(೭) ಎ, ಏ, ಐ - ಅಕ್ಷರಗಳು ಹುಟ್ಟಲು ಕಂಠ ಮತ್ತು ತಾಲು (ದವಡೆ) ಗಳೆರಡರ ಸಹಾಯ ಬೇಕಾಗುವುದರಿಂದ ಇವು ಕಂಠತಾಲು ಅಕ್ಷರಗಳೆನಿಸುವುವು.
(೮) ಒ, ಓ, ಔ - ಅಕ್ಷರಗಳು ಕಂಠ ಮತ್ತು ತುಟಿ (ಓಷ್ಠ) ಗಳೆರಡರ ಸಹಾಯದಿಂದ ಹುಟ್ಟುತ್ತವಾದ್ದರಿಂದ ಇವು ಕಂಠೋಷ್ಠ್ಯ ವರ್ಣಗಳೆನಿಸುವುವು.
(೯) ವ - ಎಂಬಕ್ಷರವು ಹಲ್ಲು (ದಂತ) ಮತ್ತು ತುಟಿ (ಓಷ್ಠ) ಗಳೆರಡರ ಸಹಾಯದಿಂದ ಹುಟ್ಟುತ್ತಾದ್ದರಿಂದ ಇದು ದಂತೋಷ್ಠ್ಯ ವರ್ಣವೆನಿಸುವುದು.
(೧೦) ಅನುಸ್ವಾರ (ಂ)ವು – ಕಂಠ ಮತ್ತು ನಾಸಿಕದ ಸಹಾಯದಿಂದ ಹುಟ್ಟುತ್ತಾದ್ದರಿಂದ ಇದು ಕಂಠನಾಸಿಕ ವರ್ಣವೆನಿಸುವುದು.
ಈ ರೀತಿಯಲ್ಲಿ ಅಕ್ಷರಗಳು ಹುಟ್ಟುವ ರೀತಿಯನ್ನು ವ್ಯವಸ್ಥೆಗೊಳಿಸಿದ್ದಾರೆ.
ಅಧ್ಯಾಯ ೧: ಸಂಜ್ಞಾ ಪ್ರಕರಣ ಸಂಜ್ಞೆಗಳು: ಭಾಗ VII – ಸಾರಾಂಶ
ಇದುವರೆಗೆ ವ್ಯಾಕರಣವನ್ನು ಓದುವವರು ತಿಳಿಯಬೇಕಾದ ಕೆಲವು ಸಂಜ್ಞೆಗಳನ್ನು ವಿವರಿಸಲಾಯಿತು. ಇದರಲ್ಲಿ ಸ್ವರ, ವ್ಯಂಜನ, ಯೋಗವಾಹ - ಎಂಬ ಐವತ್ತು ಅಕ್ಷರಗಳ ಬಗೆಗೂ, ಸ್ವರಗಳಲ್ಲಿ ಹ್ರಸ್ವ, ದೀರ್ಘ, ಪ್ಲುತಗಳ ಬಗೆಗೂ, ವ್ಯಂಜನಗಳಲ್ಲಿ ವರ್ಗೀಯ, ಅವರ್ಗೀಯ ವ್ಯಂಜನಗಳೆಂದರೇನು? ವರ್ಗೀಯ ವ್ಯಂಜನಗಳಲ್ಲಿ ಅಲ್ಪಪ್ರಾಣ, ಮಹಾಪ್ರಾಣ, ಅನುನಾಸಿಕಗಳೆಂದರಾವುವು? ಗುಣಿತಾಕ್ಷರ, ಸಜಾತೀಯ - ವಿಜಾತೀಯ ಸಂಯುಕ್ತಾಕ್ಷರಗಳೆಂದರೇನು? ಯಾವ ಯಾವ ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತವೆ? ಇತ್ಯಾದಿ ಅಂಶಗಳ ಬಗೆಗೂ ವಿವರವಾಗಿ ಹೇಳಲಾಯಿತು. ಈ ಎಲ್ಲಾ ಅಂಶಗಳನ್ನೂ ಮುಂದಿನ ಪುಟದಲ್ಲಿ ಸೂಚಿಸಿರುವ ಗೆರೆಗಳ ಸಹಾಯದಿಂದ ಸಂಕ್ಷೇಪವಾಗಿ ತಿಳಿಯ ಬಹುದು.
ಕನ್ನಡ ವರ್ಣಮಾಲೆ
೫೦ ಅಕ್ಷರ |
|||||||
ಸ್ವರಗಳು-೧೪
|
ವ್ಯಂಜನಗಳು-೩೪
|
ಯೋಗವಾಹ-೨
|
|||||
ಹ್ರಸ್ವಸ್ವರ
(1 ಮಾತ್ರಾ ಕಾಲ) |
ದೀರ್ಘಸ್ವರ
(2 ಮಾತ್ರಾ ಕಾಲ) |
ಪ್ಲುತ ಸ್ವರ
(3 ಮಾತ್ರಾ ಕಾಲ) |
ಅನುಸ್ವಾರ (ಂ)
|
ವಿಸರ್ಗ (ಃ)
|
|||
ವ್ಯಂಜನಗಳು-೩೪
|
|||||||
ವರ್ಗೀಯ ವ್ಯಂಜನ-೨೫
|
ಅವರ್ಗೀಯ ವ್ಯಂಜನ-೯
|
||||||
(ಕ ಕಾರದಿಂದ ಮ ಕಾರದವರೆಗೆ)
|
(ಯ ಕಾರದಿಂದ ಳ ಕಾರದವರೆಗೆ)
|
||||||
ಅಲ್ಪಪ್ರಾಣ
|
ಮಹಾಪ್ರಾಣ
|
ಅನುನಾಸಿಕ
|
|||||
(ಒಟ್ಟು-ಸ್ವರ, ವ್ಯಂಜನ, ಯೋಗವಾಹಗಳು ಸೇರಿ ೫೦ ಅಕ್ಷರಗಳು)
* * *
ಅಧ್ಯಾಯ ೧: ಸಂಜ್ಞಾ ಪ್ರಕರಣ ಸಂಜ್ಞೆಗಳು: ಅಭ್ಯಾಸ ಪ್ರಶ್ನೆಗಳು
(೧) ಅವನು ಎಂಬ ಶಬ್ದದಲ್ಲಿರುವ ಸ್ವರ, ವ್ಯಂಜನಗಳನ್ನು ಬಿಡಿಸಿ ಬರೆಯಿರಿ.
(೨) ದೇವರು ಎಂಬ ಶಬ್ದದಲ್ಲಿರುವ ದೀರ್ಘಸ್ವರಗಳಾವುವು?
(೩) ಅಕ್ಕಾ, ಇಲ್ಲಿ ನೋಡು ಈ ವಾಕ್ಯದಲ್ಲಿ ಬಂದಿರುವ ಪ್ಲುತಸ್ವರಗಳನ್ನು ಗುರುತಿಸಿರಿ.
(೪) ಅಣ್ಣಾ, ಇತ್ತ ಹೋಗು ಈ ವಾಕ್ಯದಲ್ಲಿ ಬಂದಿರುವ ಹ್ರಸ್ವ, ದೀರ್ಘ, ಪ್ಲುತಗಳನ್ನು ಗುರುತಿಸಿರಿ.
(೫) ಕ್ ಅ ನ್ ನ್ ಅ ಡ್ ಅ ನ್ ಆ ಡ್ ಉ – ಈ ವ್ಯಂಜನ ಸ್ವರಗಳನ್ನು ಕೂಡಿಸಿ ಶಬ್ದಮಾಡಿ ಬರೆಯಿರಿ.
(೬) ಅಂತಃಕರಣದಿಂದ ಈ ಪದದಲ್ಲಿ ಬಂದಿರುವ ಅನುಸ್ವಾರ ವಿಸರ್ಗಗಳು ಯಾವ ಯಾವ ಸ್ವರಗಳ ಮುಂದೆ ಬಂದಿವೆ?
(೭) ಹನುಮಂತನು ಮನೆಗೆ ಬಂದನು ಈ ವಾಕ್ಯದಲ್ಲಿ ಬಂದಿರುವ ಅನುನಾಸಿಕ ವರ್ಣಗಳಾವುವು?
(೮) ಸ್ತ್ರೀ, ಸ್ತ್ರ – ಈ ಸಂಯುಕ್ತಾಕ್ಷರಗಳಲ್ಲಿ ಸೇರಿರುವ ವ್ಯಂಜನಗಳಾವುವು? ಬಿಡಿಸಿ ಬರೆಯಿರಿ. ಇವನ್ನು ಎಂಥ ಸಂಯುಕ್ತವರ್ಣಗಳೆನ್ನುವರು?
(೯) ಮಲ್ಲಿಕಾರ್ಜುನ ಎಂಬಲ್ಲಿ ಬಂದಿರುವ ಸಜಾತೀಯ ಮತ್ತು ವಿಜಾತೀಯ ಸಂಯುಕ್ತಾಕ್ಷರಗಳನ್ನು ತಿಳಿಸಿರಿ.
(೧೦) ಗುಣಿತಾಕ್ಷರ, ಅನುನಾಸಿಕ, ಅಲ್ಪಪ್ರಾಣ, ಮಹಾಪ್ರಾಣ, ಪ್ಲುತ ಸ್ವರಗಳೆಂದರೇನು? ಉದಾಹರಣೆಗಳೊಂದಿಗೆ ವಿವರಿಸಿರಿ.
(೧೧) ಈ ಕೆಳಗೆ ಬಿಟ್ಟಿರುವ ಸ್ಥಳಗಳನ್ನು ಪೂರ್ಣಗೊಳಿಸಿರಿ:-
(ಅ) ಪ್ರತಿಯೊಂದು ವರ್ಗದ ೧ನೆಯ, ೩ನೆಯ ವ್ಯಂಜನಗಳು _____________
(ಆ) ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸುವ ಸ್ವರಕ್ಕೆ _________ ಎನ್ನುತ್ತಾರೆ.
(ಇ) ಅನುಸ್ವಾರ ವಿಸರ್ಗಗಳಿಗೆ ___________ ಎಂದು ಹೆಸರು.
(ಈ) ವ್ಯಂಜನಗಳಿಗೆ ಸ್ವರಗಳು ಸೇರಿ ___________ ಎನಿಸುವುವು.
(ಉ) ಎರಡು ಅಥವಾ ಅನೇಕ ವ್ಯಂಜನಗಳು ಸೇರಿ ಆಗುವ ಅಕ್ಷರಕ್ಕೆ ________ ಎನ್ನುವರು.
No comments:
Post a Comment