ಅಧ್ಯಾಯ ೫: ಕ್ರಿಯಾಪದ ಪ್ರಕರಣ: ಭಾಗ v – ಕ್ರಿಯಾಪದ ರೂಪಗಳ ಕೆಲವು ವಿಶೇಷ ರೂಪಗಳು
ಇದುವರೆಗೆ ವರ್ತಮಾನ, ಭೂತ, ಭವಿಷ್ಯತ್ ಕಾಲದಲ್ಲಿ ಆಗುವ ಕ್ರಿಯಾಪದ ರೂಪಗಳನ್ನೂ ವಿಧಿ, ನಿಷೇಧ, ಸಂಭಾವನಾರ್ಥಗಳಲ್ಲಿ ಆಗುವ ಕ್ರಿಯಾಪದರೂಪಗಳನ್ನೂ ಸಾಮಾನ್ಯವಾಗಿ ತಿಳಿದಿದ್ದೀರಿ. ಈಗ ಆ ಆರೂ ರೂಪಗಳಲ್ಲಿನ ಕೆಲವು ವಿಶೇಷ ರೂಪಗಳನ್ನು ಕೆಳಗೆ ವಿವರಿಸಲಾಗಿದೆ. ಅವನ್ನು ಗಮನವಿಟ್ಟು ನೋಡಿರಿ.
(೧) ವರ್ತಮಾನ ಕಾಲದ ಕೆಲವು ವಿಶೇಷ ಪ್ರಯೋಗಗಳು
ಇರು ಧಾತುವು ವರ್ತಮಾನಕಾಲದಲ್ಲಿ ಎರಡು ರೂಪ ಧರಿಸುತ್ತದೆ. ಉತ್ತ ಎಂಬ ಕಾಲಸೂಚಕ ಪ್ರತ್ಯಯ ಬರುವ ಮತ್ತು ಬರದಿರುವ ರೂಪಗಳು
ಪ್ರಥಮಪುರುಷ (ಅವನು)
(ಅವಳು)
(ಅದು)
|
(i) ಇರುತ್ತಾನೆ-ಇರುತ್ತಾರೆ
ಇರುತ್ತಾಳೆ-ಇರುತ್ತಾರೆ
ಇರುತ್ತದೆ-ಇರುತ್ತವೆ
|
(ii) ಇದ್ದಾನೆ-ಇದ್ದಾರೆ
ಇದ್ದಾಳೆ-ಇದ್ದಾರೆ
ಇದೆ-ಇವೆ
|
ಮಧ್ಯಮಪುರುಷ (ನೀನು)
|
ಇರುತ್ತೀಯೆ-ಇರುತ್ತೀರಿ
|
ಇದ್ದೀಯೆ-ಇದ್ದೀರಿ
|
ಉತ್ತಮಪುರುಷ (ನಾನು)
|
ಇರುತ್ತೇನೆ-ಇರುತ್ತೇವೆ
|
ಇದ್ದೇನೆ-ಇದ್ದೇವೆ
|
ಮೇಲಿನ ಇರು ಧಾತುವಿನ ಎರಡು ಬಗೆಯ ರೂಪಗಳನ್ನೂ ನೋಡಿದರೆ, ನಮಗೆ ಗೊತ್ತಾಗುವ ಅಂಶವಾವುದೆಂದರೆ, ಇರು ಧಾತುವಿಗೆ ವರ್ತಮಾನಕಾಲದಲ್ಲಿ ಉತ್ತ ಎಂಬ ಕಾಲಸೂಚಕ ಪ್ರತ್ಯಯವಿಲ್ಲದೆಯೆ ಇರು+ದ್+ದ+ಆನೆ=ಇದ್ದಾನೆ ಇತ್ಯಾದಿ ರೂಪವನ್ನೂ ಧರಿಸುತ್ತದೆ. ಇನ್ನೊಂದು ಉತ್ತ ಎಂಬ ಕಾಲಸೂಚಕ ಪ್ರತ್ಯಯ ಸಮೇತ ರೂಪಧರಿಸುತ್ತದೆ. ಕೆಲವರು-ಇರುತ್ತೆ, ಬರುತ್ತೆ, ತಿನ್ನುತ್ತೆ ಇತ್ಯಾದಿಯಾಗಿ ಬರೆಯುವ ಮಾತನಾಡುವ ರೂಢಿಯುಂಟು. ಇದು ತಪ್ಪಾದ ಪ್ರಯೋಗವೇ ಆಗಿದೆ.
(iii) ವರ್ತಮಾನ ಕಾಲದಲ್ಲಿ ಉಂಟು ಎಂಬ ಕ್ರಿಯಾರ್ಥಕಾವ್ಯಯದ ರೂಪಗಳು
(ಅ) ಅವನು ಮನೆಯಲ್ಲಿ ಇರುತ್ತಾನೆ. ಈ ವಾಕ್ಯದಲ್ಲಿ ಇರುತ್ತಾನೆ ಎಂಬ ಕ್ರಿಯಾಪದಕ್ಕೆ ಪ್ರತಿಯಾಗಿ,
(ಆ) ಅವನು ಮನೆಯಲ್ಲಿ ಉಂಟು-ಹೀಗೆ ಉಂಟು ಎಂಬ ರೂಪ ಹೇಳುವುದುಂಟು. ಸಾಮಾನ್ಯವಾಗಿ ಈ ರೂಪವನ್ನು ವರ್ತಮಾನಕಾಲದಲ್ಲಿ ಪ್ರಥಮಪುರುಷ, ಮಧ್ಯಮಪುರುಷ ಉತ್ತಮಪುರುಷ ಎಲ್ಲ ಕ್ರಿಯಾಪದಗಳ ರೂಪದಲ್ಲೂ ಹೇಳುತ್ತೇವೆ.
ಉದಾಹರಣೆಗೆ:-
(i) ಪ್ರಥಮಪುರುಷಕ್ಕೆ-
ಏಕವಚನ
|
ಬಹುವಚನ
|
||
ಪುಲ್ಲಿಂಗ (ಅವನು)
|
-
|
ಅವನು ಮನೆಯಲ್ಲಿ ಉಂಟು
|
ಅವರು ಮನೆಯಲ್ಲಿ ಉಂಟು
|
ಸ್ತ್ರೀಲಿಂಗ (ಅವಳು)
|
-
|
ಅವಳು ಮನೆಯಲ್ಲಿ ಉಂಟು
|
ಅವರು ಮನೆಯಲ್ಲಿ ಉಂಟು
|
ನಪುಂಸಕಲಿಂಗ (ಅದು)
|
-
|
ಅದು ಮನೆಯಲ್ಲಿ ಉಂಟು
|
ಅವು ಮನೆಯಲ್ಲಿ ಉಂಟು
|
(ii) ಮಧ್ಯಮಪುರುಷಕ್ಕೆ-
ಏಕವಚನ-ನೀನು ಮನೆಯಲ್ಲಿ ಉಂಟು ಎಂದು ಭಾವಿಸಿದ್ದೆ (ಇರುತ್ತೀಯೆ ಎಂದು)
ಬಹುವಚನ-ನೀವು ಮನೆಯಲ್ಲಿ ಉಂಟೆಂದು ಭಾವಿಸಿದ್ದೆ (ಇರುತ್ತೀರಿ ಎಂದು)
(iii) ಉತ್ತಮಪುರುಷಕ್ಕೆ-
ಏಕವಚನ-ನಾನು ಮನೆಯಲ್ಲಿ ಉಂಟು ಎಂದು ಬಗೆದಿದ್ದೆಯಾ? (ಇರುತ್ತೇನೆಂದು)
ಬಹುವಚನ-ನಾವು ಮನೆಯಲ್ಲಿ ಉಂಟು ಎಂದು ಬಗೆದಿದ್ದೆಯಾ? (ಇರುತ್ತೇವೆ ಎಂದು)
ಹೀಗೆ – ಉಂಟು ಎಂಬ ರೂಪವು ಇರು ಎಂಬ ಧಾತುವಿನ ವರ್ತಮಾನ ಕಾಲದ ಎಲ್ಲ ಕ್ರಿಯಾಪದಗಳ ರೂಪದಲ್ಲಿ ಬರುವುದುಂಟು. ಇದನ್ನು ಕ್ರಿಯಾರ್ಥಕಾವ್ಯಯ ಎಂದು ಕರೆಯುವರು.*
(೨) ಭೂತಕಾಲದ ಕೆಲವು ವಿಶೇಷ ರೂಪಗಳು
(i) ಮಾಡು, ಓಡು, ತೀಡು, ಕೂಡು ಇತ್ಯಾದಿ ಉಕಾರಾಂತ ಧಾತುಗಳಿಗೆ ಭೂತಕಾಲ ಸೂಚಕ ದ ಎಂಬ ಪ್ರತ್ಯಯವು ಆಗಮವಾಗಿ ಬಂದಾಗ ಧಾತುವಿನ ಕೊನೆಯು ಉ ಕಾರಕ್ಕೆ ಇ ಕಾರವು ಆದೇಶವಾಗಿ ಬರುವುದು.
ಮಾಡು
|
+
|
ದ
|
+
|
ಅನು
|
=
|
ಮಾಡಿದನು
|
ಮಾಡು
|
+
|
ದ
|
+
|
ಅರು
|
=
|
ಮಾಡಿದರು
|
ಮಾಡು
|
+
|
ದ
|
+
|
ಅಳು
|
=
|
ಮಾಡಿದಳು
|
ಮಾಡು
|
+
|
ದ
|
+
|
ಇತು
|
=
|
ಮಾಡಿತು
|
-ಇತ್ಯಾದಿ
|
ಇದರಂತೆ-ಓಡಿದನು, ತೀಡಿದನು, ಕೂಡಿದನು, -ಇತ್ಯಾದಿ ರೂಪಗಳನ್ನು ತಿಳಿಯಬೇಕು.
(ii) ಇರು, ತರು, ಬರು – ಇತ್ಯಾದಿ ಕೆಲವು ಉಕಾರಾಂತ ಧಾತುಗಳಾದರೋ ಈ ಮೊದಲು ಹೇಳಿದ ಉಕಾರಾಂತ ಧಾತುಗಳಾದ ಮಾಡು, ಓಡು-ಇತ್ಯಾದಿಗಳಂತೆ ರೂಪ ಧರಿಸುವುದಿಲ್ಲ.
ಉದಾಹರಣೆಗೆ:-
ಇರು ಧಾತು
|
ತರು ಧಾತು
|
ಬರು ಧಾತು
|
||||||
ಇದ್ದನು
|
-
|
ಇದ್ದರು
|
ತಂದನು
|
-
|
ತಂದರು
|
ಬಂದನು
|
-
|
ಬಂದರು
|
ಇದ್ದಳು
|
-
|
ಇದ್ದರು
|
ತಂದಳು
|
-
|
ತಂದರು
|
ಬಂದಳು
|
-
|
ಬಂದರು
|
ಇತ್ತು
|
-
|
ಇದ್ದವು
|
ತಂದಿತು
|
-
|
ತಂದವು
|
ಬಂದಿತು
|
-
|
ಬಂದವು
|
ಇದ್ದೀಯೆ
|
-
|
ಇದ್ದೀರಿ
|
ತಂದೆ
|
-
|
ತಂದಿರಿ
|
ಬಂದೆ
|
-
|
ಬಂದಿರಿ
|
ಇದ್ದೇನೆ
|
-
|
ಇದ್ದೇವೆ
|
ತಂದೆನು
|
-
|
ತಂದೆವು
|
ಬಂದೆನು
|
-
|
ಬಂದೆವು
|
ಮೇಲಿನ ಉದಾಹರಣೆಗಳನ್ನು ನೋಡಿದಾಗ ಇರು ಧಾತುವಿಗೆ ಭೂತಕಾಲದ ಆಖ್ಯಾತಪ್ರತ್ಯಯಗಳೂ ಕಾಲಸೂಚಕ ಪ್ರತ್ಯಯವೂ ಬಂದಾಗ ಇದ್ ಎಂಬ ರೂಪವು ನಪುಂಸಕಲಿಂಗ ಏಕವಚನದ ವಿನಾ ಎಲ್ಲಕಡೆಗೂ ಆಗುವುದು. ನಪುಂಸಕಲಿಂಗ ಏಕವಚನದಲ್ಲಿ ಮಾತ್ರ ಕ್ರಿಯಾಪದವು ಇತ್ತು ಎಂಬ ರೂಪ ಹೊಂದುವುದು.
ತರು, ಬರು, ಧಾತುಗಳ ಕೊನೆಯ ರು ಕಾರಗಳಿಗೆ ಅನುಸ್ವಾರವು ಆದೇಶವಾಗಿ ಬಂದು ತಂ-ಬಂ ಎಂಬ ರೂಪ ಧರಿಸಿದ ಮೇಲೆ, ಕಾಲಸೂಚಕ ಪ್ರತ್ಯಯ ಆಖ್ಯಾತ ಪ್ರತ್ಯಯಗಳು ಕ್ರಮವಾಗಿ ಸೇರುತ್ತವೆ.
(iii) ಕೀಳು, ಬೀಳು, ಏಳು, ಬಾಗು - ಇತ್ಯಾದಿ ಮೊದಲನೆಯ ಸ್ವರವು ದೀರ್ಘವಾಗಿ ಉಳ್ಳ ಧಾತುಗಳ ರೂಪಗಳು ಈ ಕೆಳಗಿನಂತೆ ಆಗುತ್ತವೆ-
(ಅ) ಕೀಳು ಧಾತು
|
(ಆ) ಬೀಳು ಧಾತು
|
(ಇ) ಏಳು ಧಾತು
|
(ಈ) ಬಾಗು ಧಾತು
|
ಕಿತ್ತನು-ಕಿತ್ತರು
|
ಬಿದ್ದನು-ಬಿದ್ದರು
|
ಎದ್ದನು-ಎದ್ದರು
|
ಬಗ್ಗಿದನು-ಬಗ್ಗಿದರು
|
ಕಿತ್ತಳು-ಕಿತ್ತರು
|
ಬಿದ್ದಳು-ಬಿದ್ದರು
|
ಎದ್ದಳು-ಎದ್ದರು
|
ಬಗ್ಗಿದಳು-ಬಗ್ಗಿದರು
|
ಕಿತ್ತಿತು-ಕಿತ್ತವು
|
ಬಿದ್ದಿತು-ಬಿದ್ದವು
|
ಎದ್ದಿತು-ಎದ್ದವು
|
ಬಗ್ಗಿತು-ಬಗ್ಗಿದವು
|
ಕಿತ್ತೆ-ಕಿತ್ತಿರಿ
|
ಬಿದ್ದೆ-ಬಿದ್ದಿರಿ
|
ಎದ್ದೆ-ಎದ್ದಿರಿ
|
ಬಗ್ಗಿದೆ-ಬಗ್ಗಿದಿರಿ
|
ಕಿತ್ತೆನು-ಕಿತ್ತೆವು
|
ಬಿದ್ದೆನು-ಬಿದ್ದೆವು
|
ಎದ್ದೆನು-ಎದ್ದೆವು
|
ಬಗ್ಗಿದೆನು-ಬಗ್ಗಿದೆವು
|
(iv) ಕೊಡು, ಬಿಡು, ಸುಡು, ಉಡು, ತೊಡು, ಇಡು-ಮೊದಲಾದ ಡು ಕಾರಾಂತಗಳಾದ ಧಾತುಗಳ ಭೂತಕಾಲದ ರೂಪಗಳು-
(೧) ಕೊಡು ಧಾತು
|
(೨) ಬಿಡು ಧಾತು
|
(೩) ಸುಡು ಧಾತು
|
ಕೊಟ್ಟನು-ಕೊಟ್ಟರು
|
ಬಿಟ್ಟನು-ಬಿಟ್ಟರು
|
ಸುಟ್ಟನು-ಸುಟ್ಟರು
|
ಕೊಟ್ಟಳು-ಕೊಟ್ಟರು
|
ಬಿಟ್ಟಳು-ಬಿಟ್ಟರು
|
ಸುಟ್ಟಳು-ಸುಟ್ಟರು
|
ಕೊಟ್ಟಿತು-ಕೊಟ್ಟವು
|
ಬಿಟ್ಟಿತು-ಬಿಟ್ಟವು
|
ಸುಟ್ಟಿತು-ಸುಟ್ಟವು
|
ಕೊಟ್ಟೆ-ಕೊಟ್ಟಿರಿ
|
ಬಿಟ್ಟೆ-ಬಿಟ್ಟಿರಿ
|
ಸುಟ್ಟೆ-ಸುಟ್ಟಿರಿ
|
ಕೊಟ್ಟೆನು-ಕೊಟ್ಟೆವು
|
ಬಿಟ್ಟೆನು-ಬಿಟ್ಟೆವು
|
ಸುಟ್ಟೆನು-ಸುಟ್ಟೆವು
|
(೪) ಉಡು ಧಾತು
|
(೫) ತೊಡು ಧಾತು
|
(೬) ಇಡುಧಾತು
|
ಉಟ್ಟನು-ಉಟ್ಟರು
|
ತೊಟ್ಟನು-ತೊಟ್ಟರು
|
ಇಟ್ಟನು-ಇಟ್ಟರು
|
ಉಟ್ಟಳು-ಉಟ್ಟರು
|
ತೊಟ್ಟಳು-ತೊಟ್ಟರು
|
ಇಟ್ಟಳು-ಇಟ್ಟರು
|
ಉಟ್ಟಿತು-ಉಟ್ಟವು
|
ತೊಟ್ಟಿತು-ತೊಟ್ಟವು
|
ಇಟ್ಟಿತು-ಇಟ್ಟವು
|
ಉಟ್ಟೆ-ಉಟ್ಟಿರಿ
|
ತೊಟ್ಟೆ-ತೊಟ್ಟಿರಿ
|
ಇಟ್ಟೆ-ಇಟ್ಟಿರಿ
|
ಉಟ್ಟೆನು-ಉಟ್ಟೆವು
|
ತೊಟ್ಟೆನು-ತೊಟ್ಟೆವು
|
ಇಟ್ಟೆನು-ಇಟ್ಟೆವು
|
ಮೇಲಿನ ಎಲ್ಲ ರೂಪಗಳನ್ನು ನೋಡಿದರೆ ಧಾತುವಿನ ಕೊನೆಯ ಡು ಕಾರಕ್ಕೆ ಟ್ ಕಾರವೂ ಭೂತಕಾಲ ಸೂಚಕವಾದ ದ ಕಾರಕ್ಕೆ ಟ ಕಾರವೂ ಎಲ್ಲ ಕಡೆಗೂ ಬಂದಿರುವುದನ್ನು ತಿಳಿಯಬಹುದು.
(೩) ಭವಿಷ್ಯತ್ ಕಾಲದ ಕೆಲವು ವಿಶೇಷರೂಪಗಳು
ಭವಿಷ್ಯತ್ ಕಾಲದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಬದಲಾವಣೆಗಳಾವುವೂ ಆಗುವುದಿಲ್ಲ. ನಪುಂಸಕಲಿಂಗದ ಏಕವಚನದಲ್ಲಿ ಅದು ಅಥವಾ ಉದು ಎಂಬ ಆಖ್ಯಾತಪ್ರತ್ಯಯವೂ, ಬಹುವಚನದಲ್ಲಿ ಅವು ಅಥವಾ ಉವು ಎಂಬ ಆಖ್ಯಾತ ಪ್ರತ್ಯಯಗಳೂ ಧಾತುಗಳ ಮೇಲೆ ಸೇರುತ್ತವೆ.
ಉದಾಹರಣೆಗೆ:-
ಮಾಡುವದು (ಅದು-ಆಖ್ಯಾತಪ್ರತ್ಯಯ)
ಮಾಡುವುದು (ಉದು-ಆಖ್ಯಾತಪ್ರತ್ಯಯ)
ಮಾಡುವವು (ಅವು-ಆಖ್ಯಾತಪ್ರತ್ಯಯ)
ಮಾಡುವುವು (ಉವು-ಆಖ್ಯಾತಪ್ರತ್ಯಯ)
ಕ್ರಿಯಾಪದಗಳ ಕಾಲಪಲ್ಲಟಗೊಳ್ಳುವಿಕೆ
ಅವನು ಘಂಟೆಯ ನಂತರ ಊಟ ಮಾಡುವನು (ಭವಿಷ್ಯತ್ಕಾಲ)
ಅವನು ಘಂಟೆಯ ನಂತರ ಊಟ ಮಾಡುತ್ತಾನೆ (ವರ್ತಮಾನಕಾಲ)
ಭವಿಷ್ಯತ್ಕಾಲದ ಒಂದು ಕ್ರಿಯೆಯು ವರ್ತಮಾನಕಾಲಕ್ಕೆ ತೀರ ಸಮೀಪದಲ್ಲಿ ಇದ್ದರೆ ಅದನ್ನು ವರ್ತಮಾನಕಾಲದಂತೆಯೇ ಪ್ರಯೋಗಮಾಡುವುದು ರೂಢಿಯಲ್ಲಿದೆ. ಮೇಲಿನ ಉದಾಹರಣೆಗಳಲ್ಲಿ ಘಂಟೆಯ ನಂತರ ಊಟ ಮಾಡುವನು ಎಂಬುದು ಭವಿಷ್ಯತ್ ಕಾಲವೇ ಆಗಿದೆ. ಆದರೆ ಅದನ್ನು ಘಂಟೆಯ ನಂತರ ಊಟ ಮಾಡುತ್ತಾನೆ ಎಂದು ವರ್ತಮಾನ ಕಾಲದಲ್ಲಿಯೇ ಪ್ರಯೋಗ ಮಾಡುವುದು ರೂಢಿ.
ಅವನು ನಾಳೆಯ ದಿನ ಬರುವನು (ಭವಿಷ್ಯತ್ ಕಾಲ)
ಅವನು ನಾಳೆಯ ದಿನ ಬರುತ್ತಾನೆ (ವರ್ತಮಾನಕಾಲ)
(೬೭) ಒಂದು ಕಾಲದಲ್ಲಿ ನಡೆಯುವ ಕ್ರಿಯೆಯನ್ನು ಬೇರೆ ಕಾಲದ ಕ್ರಿಯಾ ರೂಪದಿಂದ ಹೇಳುವ ಪ್ರಯೋಗಗಳು ಭಾಷೆಯಲ್ಲಿ ಉಂಟು. ಇದನ್ನೇ ಕಾಲಪಲ್ಲಟ* ಎಂದು ಹೇಳುವರು.
ಭವಿಷ್ಯತ್ಕಾಲದ ಕ್ರಿಯಾಪದಗಳು ವರ್ತಮಾನಕಾಲದಲ್ಲೂ, ವರ್ತಮಾನಕಾಲದ ಕ್ರಿಯಾಪದಗಳು ಭವಿಷ್ಯತ್ಕಾಲದಲ್ಲೂ ಪ್ರಯೋಗವಾಗುತ್ತವೆ.
(i) ವರ್ತಮಾನಕಾಲದ ಕ್ರಿಯೆಗೆ ಭವಿಷ್ಯತ್ತಿನ ಕ್ರಿಯೆ ಹೇಳುವುದಕ್ಕೆ-
ಉದಾಹರಣೆ:-
(ಅ) ಅವನು ಒಳಗೆ ಊಟ ಮಾಡುವನು.
(ಆ) ಅಗೋ ಅಲ್ಲಿ ಬರುವನು, ನೋಡು.
ಇಲ್ಲಿ ಒಳಗೆ ಊಟ ಮಾಡುತ್ತಾನೆ, ಅಗೋ ಬರುತ್ತಾನೆ ಎಂಬ ವರ್ತಮಾನ ಕಾಲದಲ್ಲಿ ಪ್ರಯೋಗಿಸಬೇಕಾದ ಕ್ರಿಯಾಪದ ಭವಿಷ್ಯತ್ತಿನಲ್ಲಿ ಪ್ರಯೋಗಗೊಂಡಿದೆ.
(ii) ಭವಿಷ್ಯತ್ಕಾಲದ ಕ್ರಿಯೆ ಹೇಳುವುದಕ್ಕೆ ವರ್ತಮಾನಕಾಲದ ಕ್ರಿಯಾಪದ ಪ್ರಯೋಗಕ್ಕೆ-
ಉದಾಹರಣೆ:-
(ಅ) ಅವನು ನಾಳೆ ಕೊಡುತ್ತಾನೆ.
(ಆ) ಮುಂದಿನವಾರ ಬರುತ್ತೇನೆ. ಇತ್ಯಾದಿ.
(೪) ವಿಧ್ಯರ್ಥದಲ್ಲಿ ಬರುವ ಕೆಲವು ವಿಶೇಷ ರೂಪಗಳು
(i) ವಿಧ್ಯರ್ಥದ ಪ್ರಥಮಪುರುಷ ಪುಲ್ಲಿಂಗ, ಸ್ತ್ರೀಲಿಂಗ ನಪುಂಸಕಲಿಂಗ, ಎರಡೂ ವಚನಗಳು ಇವುಗಳಲ್ಲೆಲ್ಲಾ ಅಲಿ ಎಂಬ ಆಖ್ಯಾತಪ್ರತ್ಯಯ ಸಾಮಾನ್ಯವಾಗಿ ಎಲ್ಲ ಧಾತುಗಳಿಗೂ ಬರುತ್ತದೆ.
ಏಕವಚನ
|
ಬಹುವಚನ
|
|
ಪ್ರಥಮಪುರುಷ
|
ಅವನು ಮಾಡಲಿ
|
ಅವರು ಮಾಡಲಿ
|
ಪ್ರಥಮಪುರಷ
|
ಅವಳು ಮಾಡಲಿ
|
ಅವರು ಮಾಡಲಿ
|
ಪ್ರಥಮಪುರುಷ
|
ಅದು ಮಾಡಲಿ
|
ಅವು ಮಾಡಲಿ
|
(ii) ಮಧ್ಯಮಪುರುಷ ಏಕವಚನದಲ್ಲಿ ಮಾತ್ರ ಕೇವಲ ಧಾತುವೇ ಕ್ರಿಯಾಪದವಾಗುತ್ತದೆ.
ನೀನು ಪುಸ್ತಕ ಓದು (ಧಾತುವೂ ಓದು)
ನೀನು ಈ ಕಾರ್ಯ ಮಾಡು
ನೀನು ಕಲ್ಲನ್ನು ಹೊರು
ಓದು, ಮಾಡು, ಹೊರು-ಎಂಬುವು ಧಾತುರೂಪಗಳೂ ಹೌದು. ವಿಧ್ಯರ್ಥದ ಮಧ್ಯಮಪುರುಷ ಏಕವಚನದ ಕ್ರಿಯಾಪದಗಳೂ ಹೌದು. ಆದರೆ ಇಲ್ಲಿ ಅಲಿ ಎಂಬ ಆಖ್ಯಾತಪ್ರತ್ಯಯವು ಬಂದು ಲೋಪವಾಗಿದೆಯೆಂದು ಭಾವಿಸಬೇಕು.ಷಿ
(iii) ತರು, ಬರು, ಕೊಯ್, ಬಯ್, ನೆಯ್ ಎಂಬ ಧಾತುಗಳೂ ಏಕಾಕ್ಷರ ಧಾತುಗಳಾದ ಸಾ, ನೋ, ಬೇ ಇತ್ಯಾದಿಗಳೂ, ವಿಧ್ಯರ್ಥದ ಮಧ್ಯಮ ಪುರುಷ ಏಕವಚನದಲ್ಲಿ ಧಾತುರೂಪವಾಗಿಯೇ ಉಳಿಯದೆ ಬೇರೆ ರೂಪ ಧರಿಸುತ್ತವೆ.
ಉದಾಹರಣೆಗೆ:-
(೩) ಕೊಯ್ ನೀನು ಹೂವು ಕೊಯ್ಯಿ (ಕೊಯ್+ಯ್+ಇ=ಕೊಯ್ಯಿ)
(೪) ಬಯ್ ನೀನು ಬಯ್ಯಿ (ಬಯ್+ಯ್+ಇ=ಬಯ್ಯಿ)
(೫) ನೆಯ್ ನೀನು ಬಟ್ಟೆಯನ್ನು ನೆಯ್ಯಿ (ನೆಯ್+ಯ್+ಇ=ನೆಯ್ಯಿ)
(೬) ಸಾ ನೀನು ಸಾಯಿ (ಸಾಯ್+ಇ=ಸಾಯಿ)
(೭) ನೋ ನೀನು ಗಾಯದಿಂದ ನೋಯಿ (ನೋಯ್+ಇ=ನೋಯಿ)
(೮) ಬೇ ನೀನು ಬೆಂಕಿಯಿಂದ ಬೇಯಿ (ಬೇಯ್+ಇ=ಬೇಯಿ)
(iv) ಮಧ್ಯಮಪುರುಷ ಏಕವಚನ ಬಹುವಚನಗಳಲ್ಲಿ ಕೆಲವು ಸಲ ಬಾ, ಬನ್ನಿರಿ ಎಂಬುವಕ್ಕೆ ಪ್ರತಿಯಾಗಿ ಬರುವುದು ಮತ್ತು ಕೊಡು, ಕೊಡಿರಿ ಎಂಬುವಕ್ಕೆ ಪ್ರತಿಯಾಗಿ ಕೊಡುವುದು ಎಂಬ ಒಂದೇ ರೂಪವನ್ನು ಪ್ರಯೋಗಿಸುವುದುಂಟು.
ಉದಾಹರಣೆಗೆ:-
(i) ನೀನು ಈ ದಿನ ಊಟಕ್ಕೆ ಬರುವುದು (ಬಾ ಎಂಬುದಕ್ಕೆ ಪ್ರತಿಯಾಗಿ)
(ii) ನೀವು ಈ ದಿನ ಊಟಕ್ಕೆ ಬರುವುದು (ಬನ್ನಿರಿ ಎಂಬುದಕ್ಕೆ ಪ್ರತಿಯಾಗಿ)
(iii) ನೀನು ಎಲ್ಲರಿಗೂ ಕೊಡುವುದು (ಕೊಡು ಎಂಬುದಕ್ಕೆ ಪ್ರತಿಯಾಗಿ
(iv) ನೀವು ಎಲ್ಲರಿಗೂ ಕೊಡುವುದು (ಕೊಡಿರಿ ಎಂಬುದಕ್ಕೆ ಪ್ರತಿಯಾಗಿ)
ಸಾಮಾನ್ಯವಾಗಿ ಈ ರೂಪಗಳನ್ನು ಗೌರವಾರ್ಥದಲ್ಲಿ ಎಲ್ಲ ಧಾತುಗಳ ಮೇಲೂ ಉವುದು ಪ್ರತ್ಯಯ ಹಚ್ಚಿ ಹೇಳುವುದುಂಟು. ಆಗ ಏಕವಚನ, ಬಹುವಚನಗಳಲ್ಲಿ ಈ ರೂಪ ಒಂದೇ ರೀತಿಯಿರುತ್ತದೆ.
(v) ಉತ್ತಮಪುರುಷ ಏಕವಚನದಲ್ಲಿ ಮಾತ್ರ ಪ್ರತ್ಯಯವೇ ಇಲ್ಲವೆಂದರೆ ತಪ್ಪಲ್ಲ. ಏಕೆಂದರೆ ತನಗೆ ತಾನೇ ಆಜ್ಞೆ, ಆಶೀರ್ವಾದ ವಿಧಿಸಿಕೊಳ್ಳುವುದು ಹೇಗೆ? ಆದರೂ ಮಾಡುವೆ ನೋಡುವೆ ಎಂದು ವ್ಯಾಕರಣದಲ್ಲಿ ಹೇಳುವುದು ವಾಡಿಕೆ. ಬಹುವಚನದಲ್ಲಿ ಮಾಡೋಣ, ನೋಡೋಣ, ಮಾಡುವಾ, ನೋಡುವಾ-ಇತ್ಯಾದಿ ಕ್ರಿಯಾಪದಗಳನ್ನು ಪ್ರಯೋಗಿಸುವುದುಂಟು. ಆದರೆ ಮಾಡುವಾ ನೋಡುವಾ ಇತ್ಯಾದಿ ಪ್ರಯೋಗಗಳು ಹೊಸಗನ್ನಡದಲ್ಲಿ ರೂಢಿಯಲ್ಲಿಲ್ಲ.
(vi) ವಾಕ್ಯವು ಪ್ರಶ್ನಾರ್ಥಕವಾಗಿದ್ದರೆ ಮಾತ್ರ ವಿಧ್ಯರ್ಥದ ಉತ್ತಮಪುರುಷ ಏಕವಚನ ದಲ್ಲಿ ಅಲಿ ಎಂಬ ಆಖ್ಯಾತಪ್ರತ್ಯಯವು ಬರುವುದುಂಟು.
ಉದಾಹರಣೆಗೆ:-
(ಅ) ತಾಯಿಯ ಹಾಲೇ ವಿಷವಾಗಿ ಕೊಂದರೆ, ಯಾರನ್ನು ದೂರಲಿ?
(ಆ) ತಂದೆಯೇ ಬೇಡವೆಂದರೆ, ಹೇಗೆ ಹೋಗಲಿ?
(ಇ) ಬೇಡವೆಂದ ಮೇಲೆ ನಾನು ಹೇಗೆ ಕೊಡಲಿ? -ಇತ್ಯಾದಿ
(೫) ನಿಷೇಧಾರ್ಥದಲ್ಲಿ ಬರುವ ಕೆಲವು ವಿಶೇಷರೂಪಗಳು
(i) ಮಾಡನು, ಮಾಡರು, ಮಾಡಳು, ಮಾಡರು, ಮಾಡದು, ಮಾಡವು, ಮಾಡೆ, ಮಾಡಲಿ, ಮಾಡೆನು, ಮಾಡೆವು. ಇವೆಲ್ಲ ಮಾಡು ಧಾತುವಿನ ನಿಷೇಧಾರ್ಥಕ ಕ್ರಿಯಾಪದಗಳು. ಈ ನಿಷೇಧರೂಪಗಳ ಬಳಕೆಯನ್ನು ಈಗೀಗ ಕನ್ನಡದಲ್ಲಿ ಮಾಡುವುದು ಕಡಿಮೆಯಾಗಿದೆ. ಅವಕ್ಕೆ ಪ್ರತಿಯಾಗಿ ಇಲ್ಲ ಎಂಬ ಕ್ರಿಯಾರ್ಥಕಾವ್ಯಯವನ್ನು ಕೃದಂತಕ್ಕೆ ಜೋಡಿಸಿ ನಿಷೇಧರೂಪ ಹೇಳುವುದೇ ಹೆಚ್ಚು. ಉದಾಹರಣೆಗೆ ಈ ಕೆಳಗೆ ನೋಡಿರಿ-
(ii) ಅವನು ಮಾಡನು - ಎಂಬುದನ್ನು ಅವನು ಮಾಡುವುದಿಲ್ಲ ಮಾಡುವುದು+ಇಲ್ಲ ಎಂದರೆ ಅವನು ಮಾಡುವುದು ಎಂಬುದು ಇಲ್ಲ. ಹೀಗೆ ನಿಷೇಧರೂಪ ಹೇಳುತ್ತೇವೆ.
(iii) ಹೀಗೆ ಇಲ್ಲ ಎಂಬ ಕ್ರಿಯಾರ್ಥಕಾವ್ಯಯವನ್ನು ಬಳಸಿ ನಿಷೇಧರೂಪಮಾಡಿ ಹೇಳಲ್ಪಟ್ಟ ರೂಪಗಳು ಏಕವಚನ, ಬಹುವಚನಗಳಲ್ಲೂ ಮೂರು ಲಿಂಗಗಳಲ್ಲೂ ಒಂದೇ ರೀತಿಯಿರುತ್ತವೆ.
ಪ್ರಥಮಪುರುಷದಲ್ಲಿ
(೧) ಪುಲ್ಲಿಂಗ
|
ಏಕವಚನ – ಅವನು ಮಾಡುವುದಿಲ್ಲ (ಮಾಡನು ಎಂಬ ರೂಪಕ್ಕೆ ಪ್ರತಿಯಾಗಿ)
|
ಬಹುವಚನ -ಅವರು ಮಾಡುವುದಿಲ್ಲ (ಮಾಡರು ಎಂಬುದಕ್ಕೆ ಪ್ರತಿಯಾಗಿ)
|
|
(೨) ಸ್ತ್ರೀಲಿಂಗ
|
ಏಕವಚನ – ಅವಳು ತಿನ್ನುವುದಿಲ್ಲ (ತಿನ್ನಳು ಎಂಬುದಕ್ಕೆ ಪ್ರತಿಯಾಗಿ)
|
ಬಹುವಚನ – ಅವರು ತಿನ್ನುವುದಿಲ್ಲ (ತಿನ್ನರು ಎಂಬುದಕ್ಕೆ ಪ್ರತಿಯಾಗಿ)
|
|
(೩) ನಪುಂಸಕ ಲಿಂಗ
|
ಏಕವಚನ – ಅದು ಬರುವುದಿಲ್ಲ (ಬಾರದು ಎಂಬುದಕ್ಕೆ ಪ್ರತಿಯಾಗಿ)
|
ಬಹುವಚನ – ಅವು ಬರುವುದಿಲ್ಲ (ಬಾರವು ಎಂಬುದಕ್ಕೆ ಪ್ರತಿಯಾಗಿ)
|
ಮಧ್ಯಮಪುರುಷದಲ್ಲಿ
(೪) ನೀನು ನೋಡುವುದಿಲ್ಲ (ನೋಡೆ-ಎಂಬರ್ಥದಲ್ಲಿ)
ನೀವು ನೋಡುವುದಿಲ್ಲ (ನೋಡರಿ-ಎಂಬರ್ಥದಲ್ಲಿ)
ಉತ್ತಮಪುರುಷದಲ್ಲಿ
(೫) ನಾನು ಬರೆಯುವುದಿಲ್ಲ (ಬರೆಯೆನು-ಎಂಬರ್ಥದಲ್ಲಿ)
ನಾವು ಬರೆಯುವುದಿಲ್ಲ (ಬರೆಯೆವು-ಎಂಬರ್ಥದಲ್ಲಿ)
(iv) ಸಾಮರ್ಥ್ಯವಿಲ್ಲ-ಎಂಬರ್ಥ ತೋರುವಾಗಲೂ, ಸಂಶಯ ತೋರುವಾಗಲೂ *ಆರನು, ಆರಳು, ಆರರು, ಆರದು, ಆರೆ, ಆರಿರಿ+, ಆರೆನು, ಆರೆವು-ಎಂಬ ರೂಪಗಳು ಧಾತುಗಳಿಗೆ ಸೇರುವುವು. ಹೀಗೆ ಸೇರುವಾಗ ಧಾತುವಿಗೂ, ಆರನು-ಇತ್ಯಾದಿ ನಿಷೇಧ ರೂಪಗಳಿಗೂ ಮಧ್ಯದಲ್ಲಿ ಅಲ್ ಎಂಬುದು ಬರುವುದು.
ಉದಾಹರಣೆಗೆ:-
ಊರನ್ನು ಸೇರಲಾರನು (ಸೇರು+ಅಲ್+ಆರನು)
ಅವಳು ಹೋಗಲಾರಳು (ಹೋಗು+ಅಲ್+ಆರಳು)
ಅವರು ತಿನ್ನಲಾರರು (ತಿನ್ನು+ಅರ್+ಆರರು)
ಅದು ಬರಲಾರದು (ಬರು+ಅಲ್+ಆರದು)
ನೀನು ಬರಲಾರೆ (ಬರು+ಅಲ್+ಆರೆ)
ನೀವು ಇಳಿಯಲಾರಿರಿ (ಇಳಿ+ಅಲ್+ಆರಿರಿಷಿ)
ನಾನು ಓದಲಾರೆನು (ಓದು+ಅಲ್+ಆರೆನು)
ನಾವು ಬರೆಯಲಾರೆವು (ಬರೆ+ಅಲ್+ಆರೆವು)
(v) ನಿಷೇಧಾರ್ಥದಲ್ಲಿ ಆಜ್ಞೆ ತೋರುವಾಗ ಕೂಡದು ಬೇಡ ಎಂಬಿವು ಧಾತುವಿನ ಕೊನೆಯಲ್ಲಿ ಬರುವುದುಂಟು.
ಆಗ ಕೂಡದು ಬಂದಾಗ ಉಕಾರಾಂತ ಧಾತುಗಳ ಉಕಾರಕ್ಕೆ ಅಕಾರವು ಆದೇಶವಾಗಿಯೂ, ಇ-ಎ ಕಾರಾಂತಗಳಾದ ಧಾತುಗಳ ಮುಂದೆ ಅಕಾರವು ಆಗಮವಾಗಿಯೂ ಬರುವುದು. ಬೇಡ ಎಂಬುದು ಬಂದಾಗ ಧಾತುವಿನ ಮುಂದೆ ಉವುದು ಎಂಬುದು ಬರುವುದು.
ಉದಾಹರಣೆಗೆ:-
ನೀನು ಬರಕೂಡದು (ಬರು=ಬರ+ಕೂಡದು)
ನೀವು ಬರಕೂಡದು (ಬರು=ಬರ+ಕೂಡದು)
ಅವನು ಬರಕೂಡದು (ಬರು=ಬರ+ಕೂಡದು)
ಅವಳು ಬರಕೂಡದು (ಬರು=ಬರ+ಕೂಡದು)
ಅವರು ಬರಕೂಡದು (ಬರು=ಬರ+ಕೂಡದು)
ನೀನು ಅರಿಯಕೂಡದು (ಅರಿ+ಅ+ಕೂಡದು)
ನೀವು ಅರಿಯಕೂಡದು (ಅರಿ+ಅ+ಕೂಡದು)
ಅವನು ಅರಿಯಕೂಡದು (ಅರಿ+ಅ+ಕೂಡದು)
ಅವಳು ಅರಿಯಕೂಡದು (ಅರಿ+ಅ+ಕೂಡದು)
ನೀನು ನಡೆಯಕೂಡದು (ನಡೆ+ಅ+ಕೂಡದು)
ನೀವು ನಡೆಯಕೂಡದು (ನಡೆ+ಅ+ಕೂಡದು)
ಅವನು ನಡೆಯಕೂಡದು (ನಡೆ+ಅ+ಕೂಡದು)
(vi) ಬೇಡ ಎಂಬ ನಿಷೇಧ ರೂಪವು ಬರುವುದಕ್ಕೆ- ಉದಾಹರಣೆ:-
ಅವನು ಬರುವುದು ಬೇಡ
ಅವಳು ಬರುವುದು ಬೇಡ
ಅವರು ಬರುವುದು ಬೇಡ
ಅದು ಬರುವುದು ಬೇಡ
ನೀನು ಬರುವುದು ಬೇಡ
ನೀವು ತಿನ್ನುವುದು ಬೇಡ
ನಾನು ಹೋಗುವುದು ಬೇಡ
ನಾವು ನಿಲ್ಲುವುದು ಬೇಡ
ಬೇಡ ಎಂಬ ನಿಷೇಧರೂಪವು ಮಧ್ಯಮಪುರುಷ ಏಕವಚನ, ಬಹುವಚನಗಳಲ್ಲಿ ಬಂದಾಗ, ಕೂಡದು ಎಂಬ ನಿಷೇಧವಾಚಿಯು ಬಂದಾಗ ಯಾವ ರೂಪವನ್ನು ಧಾತುವು ಹೊಂದುವುದೋ ಅದೇ ರೂಪವನ್ನು ಹೊಂದುತ್ತದೆ. ಬಹುವಚನದಲ್ಲಿ ಬೇಡ ಎಂಬುದರ ಮುಂದೆ ಇರಿ ಪ್ರತ್ಯಯ ಬರುವುದು.
ಉದಾಹರಣೆಗೆ:-
ನೀನು ಬರಬೇಡ
ನೀವು ಬರಬೇಡಿರಿ
ನೀನು ತಿನ್ನಬೇಡ
ನೀವು ತಿನ್ನಬೇಡಿರಿ
ನೀನು ಕರೆಯಬೇಡ
ನೀವು ಕರೆಯಬೇಡಿರಿ
(vii) ನಿಷೇಧಾರ್ಥದಲ್ಲಿ ಇನ್ನೂ ಕೆಲವು ರೂಪಗಳನ್ನು ಗಮನಿಸಿರಿ
೧) ಆರಕ್ಕೆ ಏರ
೩) ಅವನು ಯಾರನ್ನೂ ಬೇಡ
೨) ಮೂರಕ್ಕೆ ಇಳಿಯ
೪) ಹಣ್ಣನ್ನು ತಿನ್ನ
ಏರ, ಇಳಿಯ, ಬೇಡ, ತಿನ್ನ, ಇವು ಕ್ರಮವಾಗಿ ಏರು, ಇಳಿ, ಬೇಡು, ತಿನ್ನು ಧಾತುಗಳ ನಿಷೇಧ ರೂಪಗಳು. ಇಲ್ಲಿ ಧಾತುವಿನ ಕೊನೆಯ ಸ್ವರಕ್ಕೆ ಅಕಾರವು ಎಲ್ಲ ಕಡೆಗೂ ಆದೇಶವಾಗಿ ಬಂದಿದೆ. ಈ ಅಕಾರವೇ ನಿಷೇಧಸೂಚಕ ಪ್ರತ್ಯಯವೆನಿಸಿದೆ. ಇಳಿ ಎನ್ನುವಲ್ಲಿ ಅಕಾರವು ಧಾತುವಿನ ಮುಂದೆ ಬಂದಿದೆ.
No comments:
Post a Comment