Friday, 4 September 2015

ಗಾಯತ್ರಿ ಮಂತ್ರ ವಿಶೇಷ

gayatri-mantra
ಮಂತ್ರಗಳಲ್ಲಿ ಗಾಯತ್ರೀ ಮಂತ್ರವೇ ರಾಜನು.
ಅದರಲ್ಲೂ ಸವಿತೃ ಗಾಯತ್ರಿಗೆ ಅತಿಯಾದ ಬಲವೂ ಮಹತ್ವವೂ ಇದೆ. ಪ್ರತಿಯೊಂದು ದೇವತೆಗಳಿಗೂ ಗಾಯತ್ರಿಗಳಿವೆ.
ಆದರೆ ಎಲ್ಲಾ ದೇವತಾ ಶಕ್ತಿ ಸೂರ್ಯನಲ್ಲೇ ಇರುವುದರಿಂದ ಈ ಸವಿತೃಗಾಯತ್ರಿ ಮಂತ್ರಗಳಲ್ಲಿ ರಾಜನು.
ಗಾಯತ್ರಿಯಲ್ಲಿ 24 ಅಕ್ಷರಗಳಿವೆ. ಇದು ಶಡ್ಜ ಸ್ಥಾಯಿ ಶ್ರುತಿಯಲ್ಲಿದೆ.ಗಾಯತ್ರಿಯು ಏಳು ಪ್ರಧಾನ ಛಂಧಸ್ಸುಗಳಲ್ಲಿ ಒಂದಾಗಿದೆ.ಇದರ ಅಭಿಮಾನಿ ದೇವತೆಯು ಅಗ್ನಿ ಪತ್ನಿ ಸ್ವಾಹಾ ದೇವಿ.
ಇತರ ಛಂದಸ್ಸುಗಳೆಂದರೆ, ಉಷ್ಣಿಕ್,ಅನುಷ್ಟುಪ್,ಬೃಹತಿ,ಪಂಕ್ತಿ,ತ್ರಿಷ್ಟುಪ್,ಜಗತೀ ಗಳು.ಇವುಗಳಿಗೆ ಕ್ರಮವಾಗಿ 28,32,36,40,44,48ಅಕ್ಷರಗಳು.
ಹಾಗೆಯೇ ಕ್ರಮವಾಗಿ ಋಷಭ,ಗಾಂಧಾರ,ಮದ್ಯಮ,ಪಂಚಮ,ದೈವತ,ನಿಷಾದಗಳೆಂಬ ಸ್ಥಾಯಿ ಶೃತಿಗಳು.
ಅಭಿಮಾನಿ ದೇವತೆಗಳು ಕ್ರಮವಾಗಿ- ಸೂರ್ಯ ಪತ್ನಿ ಸಂಜ್ಞಾ, ಚಂದ್ರ ಪತ್ನಿ ರೋಹಿಣಿ,ಬೃಹಸ್ಪತಿ ಪತ್ನಿ ತಾರಾ, ಮಿತ್ರ ವರುಣ ಪತ್ನಿಯರು, ಇಂದ್ರ ಪತ್ನಿ ಶಚೀದೇವಿ, ಕೊನೆಯದ್ದಕ್ಕೆ ಸರ್ವ ದೇವತಾ ಸ್ತ್ರೀಯರು.
ಒಂದು ಲಕ್ಷ ಗಾಯತ್ರಿ ಜಪದಿಂದ ಪೂರ್ವಕೃತ ಸಮಸ್ತ ದೋಷ ನಿವಾರಣೆಯಾಗುತ್ತದೆ.ನಿಮಗೆ ಒಂದು ವಿವರಣೆ ಹೇಳಬೇಕೆಂದರೆ ಇದೊಂದು antivirus system. ಶಬ್ದದಿಂದ ನಾಡಿ ಕಂಪನ.ಕಂಪನದಿಂದ ನಾಡಿ ಜಾಗೃತಿ ಯಾಗುತ್ತದೆ. ಈ ಗಾಯತ್ರಿಯು ವಿದ್ಯುತ್ತಿಗಿಂತ ಹೆಚ್ಚು ಆವರ್ತನ ಉಳ್ಳದ್ದಾಗಿದೆ. ಯಾವುದೇ ಶಬ್ದಕ್ಕೆ ಸೆಕುಂಡಿಗೆ 20ಸಾವಿರಕ್ಕಿಂತ ಮೇಲ್ಪಟ್ಟು ಆವರ್ತನಗಳಿವೆ .ಆಗ ಈ ಗಾಯತ್ರಿ ಮಂತ್ರದ ಸಂಯೋಜನೆಯು ಸೆಕುಂಡಿಗೆ 11ಸಾವಿರ ಬಾರಿ ಆವರ್ತನೆಯಾಗುತ್ತದೆ.
ಇಂತಹ ಗಾಯತ್ರಿ ಮಂತ್ರವನ್ನು ಪಠಿಸಬೇಕಾದರೆ ಶರೀರ ಧಾರಣಾ ಶಕ್ತಿ ಬೇಕು. ಶೂದ್ರರು ಹೇಳಬಾರದು ಎಂದಿದೆ. ಶೂದ್ರ ಎಂದರೆ ಬ್ರಹ್ಮ ಜ್ಞಾನ ಪಡೆಯದವರು ಎಂದರ್ಥ. ಅಂದರೆ ಇಂತಹ ಮಂತ್ರದ ದುರುಪಯೋಗ ಪಡೆಯುವವರು ಆಗಬಾರದು ಎಂದರ್ಥ.ಉದಾ: ಪಾಕಿಸ್ಥಾನದಂತಹ ರಾಷ್ಟ್ರಕ್ಕೆ ಅಣುಬಾಂಬ್ ಹಕ್ಕು ನೀಡಿದರೆ ಏನಾದೀತು.? ಅದಕ್ಕಾಗಿ ಯೋಗ್ಯರು ಮಾತ್ರ ಪಠಿಸಬೇಕು ಎಂದಿದ್ದಾರೆ. ಇನ್ನೊಂದೆಡೆ ಅನಾಹುತವಾದಾಗ ಅದರ ಉಪಸಂಹಾರ ಮಾಡುವ ತಾಕತ್ತಿರ ಬೇಕು.ಮಹಾಭಾರತದಲ್ಲಿ ಅಶ್ವತ್ಥಾಮ ಮತ್ತು ಅರ್ಜುನರು ಪರಸ್ಪರ ಬ್ರಹ್ಮಾಸ್ತ್ರ ಪ್ರಯೋಗಿಸಿ ಅನಾಹುತವಾಯಿತು.ಕೊನೆಗೆ ವೇದವ್ಯಾಸರು ಬಂದು ಇಬ್ಬರಿಗೂ ಆ ಅಸ್ತ್ರವನ್ನು ಹಿಂದಕ್ಕೆ ತೆಗೆದುಕೊಳ್ಳಲು ಹೇಳುತ್ತಾರೆ.ಆದರೆ ಬ್ರಾಹ್ಮಣನಲ್ಲದ ಅರ್ಜುನನು ಹಿಂದಕ್ಕೆ ತೆಗೆದುಕೊಂಡರೂ, ಬ್ರಾಹ್ಮಣನಾದ ಅಶ್ವತ್ಥಾಮನಿಗೆ ಉಪಸಂಹಾರ ಗೊತ್ತಿರಲಿಲ್ಲ. ವೇದವ್ಯಾಸರು ಅಶ್ವತ್ಥಾಮನಿಗೆ ‘ಛೀಮಾರಿ ‘ಹಾಕಿ ಕೃಷ್ಣನಿಗೆ ಪ್ರಾರ್ಥಿಸಿದಾಗ ಕೃಷ್ಣನೇ ತನ್ನ ಸುದರ್ಶನವನ್ನು ಕಳುಹಿಸಿ ಆ ಬ್ರಹ್ಮಾಸ್ತ್ರವನ್ನು ನಿಷ್ಕೃಯಗೊಳಿಸುತ್ತಾನೆ.ಇಲ್ಲಿ ಅಶ್ವತ್ಥಾಮನು ಶೂದ್ರತ್ವ ಪಡೆಯಬೇಕಾಗುತ್ತದೆ. ಪಠಿಸುವುದಕ್ಕೆ ಯಾರಿಗೂ ಜಾತಿ ಅಡ್ಡಿಯಾಗದು.ಆದರೆ ಬ್ರಹ್ಮತ್ವ ಇಲ್ಲದಿದ್ದಾಗ ಅದು ದುರುಪಯೋಗವಾದರೆ? ಅದಕ್ಕಾಗಿ ಈ ನಿಬಂಧನೆ ಹಾಕಿದ್ದಾರಷ್ಟೆ. .ಜಾತಿ ದ್ವೇಷದಿಂದಲೋ, ಪುರೋಹಿತರ ಕಾರುಬಾರದಿಂದಲೋ ಈಗ ಇಂತಹ ನಿಬಂಧನೆ ಇರಬಹುದು.ಆದರೆ ಆಗಿನ ನಿರ್ಬಂಧದ ರೂಪವೇ ಬೇರೆ.ಒಟ್ಟಿನಲ್ಲಿ ಗಾಯತ್ರಿ ಪಠಿಸಲು qualify ಆಗಬೇಕು.ಹೆಂಗಸರು ಹೇಳಬಾರದು ಎಂದಿದೆ.ಎಲ್ಲಿಯ ವರೆಗೆ ಸ್ತ್ರೀ ಗರ್ಭಧಾರಣೆ ಮಾಡುತ್ತಾಳೋ ಅಲ್ಲಿಯವರೆಗೆ ಹೇಳಬಾರದು.ಹೇಳಿದರೆ ವಿಕೃತ ಕಾಯವೋ, ಮನಸ್ಸೋ ಇರುವ ಶಿಶು ಜನನವಾಗುತ್ತದೆ. ಯಾವಾಗ ಸಂತಾನ ಬೇಕಾಗಿಲ್ಲವೋ ಆ ನಂತರ ಉಪದೇಶ ಪಡೆದು ಪಠಿಸಬಹುದು. ಪುರಾಣದಲ್ಲಿ ಸ್ತ್ರೀಯರು ಬ್ರಹ್ಮಾಸ್ತ್ರ ಪ್ರಯೋಗ ನಡೆಸಿದ ಉಲ್ಲೇಖಗಳಿವೆ.
ಗಾಯತ್ರಿ ಪಠಿಸಬೇಕಿದ್ದರೆ ಅಗ್ನಿ ಮೂಲಕ ಉಪದೇಶ ಬೇಕು.ಉಪನಯನದಲ್ಲಿ ನಡೆಯುವ ಅಗ್ನಿಕಾರ್ಯವೇ ಇದನ್ನು ಉಪದೇಶ ಪಡೆಯುವ ಮಾಧ್ಯಮ.ಯಾಕೆಂದರೆ ಇದರ ಅಭಿಮಾನಿ ದೇವತೆಯೇ ಅಗ್ನಿಪತ್ನಿ ಸ್ವಾಹಾ ದೇವಿ. ಗಾಯತ್ರಿ ಪಠಿಸುವುದಕ್ಕೆ ಮುಂಚೆ ಮತ್ತು ನಂತರ ಗಾಯತ್ರಿ ಧ್ಯಾನ ಮಾಡಬೇಕು. ಅಂಗನ್ಯಾಸಾದಿಗಳು ಬೇಕು. ಇದಕ್ಕೂ ಮೊದಲು ಆಸನ ಶುದ್ಧಿ, ಪ್ರಾಣಾಯಾಮಗಳನ್ನು ಮಾಡಬೇಕು.ಇದು ಗಾಯತ್ರಿ ಜಪದ ನಿಯಮ
ಗಾಯತ್ರಿ ಮಂತ್ರಕ್ಕೆ ನಾಲ್ಕು ಋಷಿಗಳ ಶಾಪವಿದೆ. ಹಾಗಾಗಿ ಮಂತ್ರ ಜಪಕ್ಕೆ ಮುನ್ನ ಈ ಋಷಿಗಳ ಶಾಪ ವಿಮೋಚನಾ ಮಂತ್ರ ಹೇಳಬೇಕು.ಆ ಋಷಿ ಶಾಪಗಳೆಂದರೆ – ಬ್ರಹ್ಮ, ವಸಿಷ್ಠ, ವಿಶ್ವಾಮಿತ್ರ, ಶುಕ.
ವಿಶ್ವಾಮಿತ್ರರು ಈ ಮಂತ್ರ ದೃಷ್ಟಾರರು.
ಹಾಗಾಗಿ ಈ ಪ್ರಕಾರದ ನಿಯಮವನ್ನು ಪಾಲಿಸಬಲ್ಲೆ ಎಂಬವರು ಗಾಯತ್ರಿ ಮಂತ್ರ ಪಠಿಸಬಹುದು. ಈ ನಿಯಮ ತಪ್ಪಿದರೆ ಮನೋ ವಿಕಾರಗಳು ಬಂದರೆ ಅಪಾಯವಾದೀತು ಎಂಬುದಕ್ಕಾಗಿಯೇ ಕೆಲ ನಿಬಂಧನೆ ಹಾಕಿದ್ದು ವಿನಃ ಮೇಲು ಜಾತಿ ಕೀಳು ಜಾತಿ ಎಂಬ ತಾರತಮ್ಯದಿಂದಲ್ಲ.ಇದರ ಮಂತ್ರ ದೃಷ್ಟಾರ ಜನ್ಮತಃ ಕ್ಷತ್ರಿಯ.ಬ್ರಾಹ್ಮಣನಲ್ಲ.ಆದರೆ ಸಾಧನೆಯಿಂದ ಬ್ರಹ್ಮತ್ವ ಪಡೆದವನು. ಸಾಧನೆ ಶ್ರದ್ಧೆ ಇದ್ದರೆ ಯಾರೂ ಬ್ರಹ್ಮತ್ವ ಪಡೆಯಬಹುದು ಎಂದು ತೋರಿಸಿಕೊಟ್ಟವರು ವಿಶ್ವಾಮಿತ್ರರು.
ಈಗ ಕೇವಲ ‘ಸಿಡಿ ‘ಗಳಲ್ಲಿ ಲಭ್ಯವಿರುವ ‘ಓಂ ಭೂರ್ಭುವಸ್ವಃ….’ ಎಂಬ ಮಂತ್ರಕೇಳಿ ಅದನ್ನು ಪಠಿಸಿದರೆ ಅದು ಗಾಯತ್ರಿಯೂ ಆಗದು ಇನ್ಯಾವುದೇ ಹಾಡೂ ಆಗದು.ಅವರು ಇದನ್ನು ಸೃಷ್ಟಿ ಮಾಡಿ ಲಾಭ ಮಾಡಿಕೊಂಡರಷ್ಟೆ. ನಿಯಮ ಪ್ರಕಾರ ಹೇಳಿದರೆ ಅದು ಇಡೀ ಬ್ರಹ್ಮಾಂಡವನ್ನೇ ಸ್ವಾಧೀನ ಪಡಿಸಿಕೊಳ್ಳುವಂತಹ ಮಹಾ ಮಂತ್ರವಾಗಿದೆ.
ಪ್ರಕಾಶ್ ಅಮ್ಮಣ್ಣಾಯ
ಜ್ಯೋತಿರ್ವಿಜ್ಞಾನಂ.
Fight For Right

No comments:

Post a Comment