ಗುರುವಂದನ ಸರ್ವಜ್ಞ
ಗುರುವಂದನ
ಸರ್ವಜ್ಞನೆಂಬುವನು ಗರ್ವದಿಂದಾದವನೆ ?
ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ
ಗುರುವಿನಾ ವಿಸ್ತರದ, ಪರಿಯನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗೆ
ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ
.
ಊರಿಂಗೆ ದಾರಿಯನು ಆರು ತೋರಿದರೇನು?
ಸಾರಾಯದಾ ನಿಜವ ತೋರುವ ಗುರುವು ತಾ
ನಾರಾದರೇನು? ಸರ್ವಜ್ಞ
ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು
ಪರದೇಶಿಯಂತೆ ಇರುತಿರ್ಪಯೋಗಿಯನು
ಪರಮಗುರುವೆಂಬೆ ಸರ್ವಜ್ಞ
ಹರನಿಚ್ಛೆಯಿಲ್ಲದಲೆ ಹರಿದು ಹೋಗದು ಪಾಪ
ಹರಭಕ್ತಿಯುಳ್ಳ ಗುರುವರನು ಓರ್ವನೇ
ನರ ದೈವವೆಂಬೆ ಸರ್ವಜ್ಞ
ಬಂಧುಗಳು ಆದವರು ಬಂದುಂಡು ಹೋಗುವರು
ಬಂಧನವ ಕಳೆಯಲರಿಯರಾ ಗುರುವಿಗಿಂತ
ಬಂಧುಗಳುಂಟೆ ಸರ್ವಜ್ಞ
.
ಜೀವ, ಸದ್ಗುರುನಾಥ, ಕಾಯ ಪುಸಿಯನೆ ತೋರಿ
ಮಾಯನಾಶವನು ಹರಿಸುತ್ತ ಶಿಷ್ಯಂಗೆ
ತಾಯಿಯಂತಾದ ಸರ್ವಜ್ಞ
ತಂದೆಗೂ ಗುರುವಿಗೂ ಒಂದು ಅಂತರವುಂಟು
ತಂದೆ ತೋರುವನು ಸದ್ಗುರುವ. ಗುರುರಾಯ
ಬಂಧನವ ಕಳೆವ ಸರ್ವಜ್ಞ
.
ಗುರುವಿಂಗೆ ದೈವಕ್ಕೆ, ಹಿರಿದು ಅಂತರವುಂಟು
ಗುರುತೋರ್ವ ದೈವದೆಡೆಯನು ದೈವತಾ
ಗುರುವ ತೋರುವನೇ? ಸರ್ವಜ್ಞ
.
ಗುರುಪಾದಕೆರಗಿದರೆ, ಶಿರಸು ತಾ ಮಣಿಯಕ್ಕು
ಪರಿಣಾಮವಕ್ಕು ಪದವಕ್ಕು ಕೈಲಾಸ
ನೆರಮನೆಯಕ್ಕು ಸರ್ವಜ್ಞ
ಸಾಹಿತ್ಯ: ಸರ್ವಜ್ಞ
ಸಾಹಿತ್ಯ: ಸರ್ವಜ್ಞ
No comments:
Post a Comment