Monday, 30 October 2017

ಬೆಣ್ಣೆಕದ್ದ ನಮ್ಮ ಕೃಷ್ಣ / Benne kadda namma krishna

ಬೆಣ್ಣೆ ಕದ್ದ ನಮ್ಮ ಕೃಷ್ಣ,
ಬೆಣ್ಣೆ ಕದ್ದನಮ್ಮ.

ಬೆಣ್ಣೆಯ ಕದ್ದು ಜಾರುತ ಬಿದ್ದು
ಮೊಳಕಾಲೂದಿಸಿಕೊಂಡ;
ಬಿಂದಿಗೆ ಬಿದ್ದು ಸಿಡಿಯಲು ಸದ್ದು
ಬೆಚ್ಚಿದ ರಾಧೆಯ ಗಂಡ.
                            ಬೆಣ್ಣೆ ಕದ್ದ ....

ತಾಯಿ ಬಂದಳೋಡಿ
ಕಳ್ಳನ ಕಣ್ಣಿನಲ್ಲಿ ಕೊಡಿ!
ಕಣ್ಣಲಿ ಆಕೆ ಸಿಟ್ಟನು ತಾಳಿ
ಸೊಂಟಕೆ ಕೈಯಿಟ್ಟು,
ಆದಳು ಅರೆ ಚಣ ಭೀಕರ ಕಾಳಿ
ದುರುದುರು ಕಣ್ ಬಿಟ್ಟು!
ಹಣೆ ತುಟಿ ಕೆನ್ನೆಗೆ ಬೆಣ್ಣೆ ಮೆತ್ತಿದ
ಒರಟನ ನೋಟಕ್ಕೆ -
ಇಳಿಯಿತು ಕೋಪ ಅರಳಿತು ಕೆಂದುಟಿ
ತುಂಟನ ಆಟಕ್ಕೆ;
ತಪ್ಪಿದ ದಂಡಕೆ ನಿಟ್ಟುಸಿರೆಳೆದ
ಬೆಣ್ಣೆಗಳ್ಳ ನೀಲ.
ತಟ್ಟನೆ ಅಳುವುದ ನಿಲ್ಲಿಸಿ ನಕ್ಕ
ಬಾಯಗಲಿಸಿ ಬಾಲ -
ಹರಡಿದ ಬೆಳುದಿಂಗಳ ಜಾಲ.

ಅವನ ಅಕುಟಿಲ ಬೆಣ್ಣೆಯಂಥ ನಗು
ಕಾಯಲಿ ಜಗದವರ;
ಸಂತತ ನಗಿಸಲಿ ನಗದವರ.

ಬೆಣ್ಣೆ ಕದ್ದ ನಮ್ಮ ಕೃಷ್ಣ,
ಬೆಣ್ಣೆ ಕದ್ದನಮ್ಮ. 
                                                     - ಕೆ. ಎಸ್. ನಿಸಾರ್ ಅಹಮದ್

No comments:

Post a Comment