Monday 30 October 2017

~Madhura Haadugalu~: ಭಲೆ ಭಲೆ ಚಂದದ...

~Madhura Haadugalu~: ಭಲೆ ಭಲೆ ಚಂದದ...: -ಕೆ. ಕಲ್ಯಾಣ್  ಎಲ್ಲ ಶಿಲ್ಪಗಲಿಗೂ ಒಂದೊಂದು ಹಿಂದಿನ ಕಥೆ ಇದೆ  ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ  ಭಲೆ ಭಲೆ ಚಂದದ ಚೆಂದುಳ್ಳಿ ಹೆಣ್ಣು ನೀನು  ಮಿಂ...

ಯಾವ ಜನ್ಮದ ಮೈತ್ರಿ / Yaava janmada maitri

ರಚನೆ - ಕುವೆಂಪು
 
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು 
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ !
ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ, 

ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು!  
ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು!
ಮೇಲೆ ತೆರೆನೊರೆಯೆದ್ದು ಭೋರ್ಗರೆಯುತಿರೆ ರೇಗಿ,
ಅದರಂತರಾಳದಲಿ ಗುಪ್ತಗಾಮಿನಿಯಾಗಿ;

ಹೃದಯಗಳು ನಲಿಯುತಿವೆ ಪ್ರೇಮ ತೀರ್ಥದಿ ಮಿಂದು!
ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ;
ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ?
ಕುರುಡನಾದಗೆ ದಾರಿಯರ್ಥ ತಿಳಿಯಲೆ ಬೇಕೆ?

ಹಾದಿ ಸಾಗಿದರಾಯ್ತು ಬರುವುದೆಲ್ಲಾ ಬರಲಿ!  
ಬಾರಯ್ಯ, ಮಮಬಂಧು, ಜೀವನಪಥದೊಳಾವು
ಒಂದಾಗಿ ಮುಂದುವರಿಯುವ; ಹಿಂದಿರಲಿ ಸಾವು

ನೇಗಿಲ ಯೋಗಿ / Negila Yogi

ನೇಗಿಲ ಹಿಡಿದ, ಹೊಲದೊಳು ಹಾಡುತ,
ಉಳುವ ಯೋಗಿಯ ನೋಡಲ್ಲಿ.
ಫಲವನು ಬಯಸದ ಸೇವೆಯೇ ಪೂಜೆಯು,
ಕರ್ಮವೇ ಇಹಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ,
ಸೃಷ್ಟಿನಿಯಮದೊಳಗವನೇ ಭೋಗಿ.
                                               ಉಳುವ ಯೋಗಿಯ....

ಲೋಕದೊಳೇನೆ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುದಿಸಲಿ, ರಾಜ್ಯಗಳಳಿಯಲಿ,
ಹಾರಲಿ ಗದ್ದುಗೆ ಮುಕುಟಗಳು,
ಮುತ್ತಿಗೆ ಹಾಕಲಿ ಸೈನಿಕರೆಲ್ಲ,
ಬಿತ್ತುಳುವುದನವ ಬಿಡುವುದೇ ಇಲ್ಲ.
                                               ಉಳುವ ಯೋಗಿಯ....

ಯಾರೂ ಅರಿಯದ ನೇಗಿಲ ಯೋಗಿಯೇ
ಲೋಕಕೆ ಅನ್ನವನೀಯುವನು.
ಹೆಸರನು ಬಯಸದೆ ಅತಿಸುಖಕೆಳಸದೆ,
ದುಡಿವನು ಗೌರವಕಾಶಿಸದೆ.
ನೇಗಿಲ ಕುಲದೊಳಗಡಗಿದೆ ಕರ್ಮ,
ನೇಗಿಲ ಮೇಲೆಯೇ ನಿಂತಿದೆ ಧರ್ಮ.
                                               ಉಳುವ ಯೋಗಿಯ....

                                                                                         - ಕುವೆಂಪು

ಜಯ ಭಾರತ ಜನನಿಯ ತನುಜಾತೆ / Jaya bhaarata jananiya tanujaate

ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!

ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂದನರವತರಿಸಿದ
                                                         ಭಾರತ ಜನನಿಯ ತನುಜಾತೆ..

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ..
                                                         ಭಾರತ ಜನನಿಯ ತನುಜಾತೆ...

ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ.
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ.
ಕಬ್ಬಿಗರುದಿಸಿದ ಮಂಗಳ ಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ..
                                                         ಭಾರತ ಜನನಿಯ ತನುಜಾತೆ...
ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ...
                                                         ಭಾರತ ಜನನಿಯ ತನುಜಾತೆ...

ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ.
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ...
                                                         ಭಾರತ ಜನನಿಯ ತನುಜಾತೆ...


                                                                                                         - ಕುವೆಂಪು

ಬೆಣ್ಣೆಕದ್ದ ನಮ್ಮ ಕೃಷ್ಣ / Benne kadda namma krishna

ಬೆಣ್ಣೆ ಕದ್ದ ನಮ್ಮ ಕೃಷ್ಣ,
ಬೆಣ್ಣೆ ಕದ್ದನಮ್ಮ.

ಬೆಣ್ಣೆಯ ಕದ್ದು ಜಾರುತ ಬಿದ್ದು
ಮೊಳಕಾಲೂದಿಸಿಕೊಂಡ;
ಬಿಂದಿಗೆ ಬಿದ್ದು ಸಿಡಿಯಲು ಸದ್ದು
ಬೆಚ್ಚಿದ ರಾಧೆಯ ಗಂಡ.
                            ಬೆಣ್ಣೆ ಕದ್ದ ....

ತಾಯಿ ಬಂದಳೋಡಿ
ಕಳ್ಳನ ಕಣ್ಣಿನಲ್ಲಿ ಕೊಡಿ!
ಕಣ್ಣಲಿ ಆಕೆ ಸಿಟ್ಟನು ತಾಳಿ
ಸೊಂಟಕೆ ಕೈಯಿಟ್ಟು,
ಆದಳು ಅರೆ ಚಣ ಭೀಕರ ಕಾಳಿ
ದುರುದುರು ಕಣ್ ಬಿಟ್ಟು!
ಹಣೆ ತುಟಿ ಕೆನ್ನೆಗೆ ಬೆಣ್ಣೆ ಮೆತ್ತಿದ
ಒರಟನ ನೋಟಕ್ಕೆ -
ಇಳಿಯಿತು ಕೋಪ ಅರಳಿತು ಕೆಂದುಟಿ
ತುಂಟನ ಆಟಕ್ಕೆ;
ತಪ್ಪಿದ ದಂಡಕೆ ನಿಟ್ಟುಸಿರೆಳೆದ
ಬೆಣ್ಣೆಗಳ್ಳ ನೀಲ.
ತಟ್ಟನೆ ಅಳುವುದ ನಿಲ್ಲಿಸಿ ನಕ್ಕ
ಬಾಯಗಲಿಸಿ ಬಾಲ -
ಹರಡಿದ ಬೆಳುದಿಂಗಳ ಜಾಲ.

ಅವನ ಅಕುಟಿಲ ಬೆಣ್ಣೆಯಂಥ ನಗು
ಕಾಯಲಿ ಜಗದವರ;
ಸಂತತ ನಗಿಸಲಿ ನಗದವರ.

ಬೆಣ್ಣೆ ಕದ್ದ ನಮ್ಮ ಕೃಷ್ಣ,
ಬೆಣ್ಣೆ ಕದ್ದನಮ್ಮ. 
                                                     - ಕೆ. ಎಸ್. ನಿಸಾರ್ ಅಹಮದ್

ನಿತ್ಯೋತ್ಸವ / Nityotsava

ರಚನೆ; ಕೆ. ಸ್. ನಿಸಾರ್ ಅಹಮದ್ 
                           - ೧ -
ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ,
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ......
                          - ೨ -
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, 
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ 
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ......
                         - ೩ - 
ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ......  

ಎಲ್ಲ ಮರೆತಿರುವಾಗ... / Ella maretiruvaaga

ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆಯೇಕೆ ಮಧುರ ನೆನಪೇ

ಕಪ್ಪು ಕಣ್ಣಿನ ನೆಟ್ಟ ನೋಟದರೆಚಣದಲ್ಲಿ
ತೊಟ್ಟ ಬಾಣದ ಹಾಗೆ ಬಾರದಿರು ನೆನಪೇ
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನ
ಹಿರಿದು ಕೊಲ್ಲಲು ಬಳಿಗೆ ಬಾರದಿರು ನೆನಪೇ ||

ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗ ಮಾಡಿ ನಿಂತಿರುವ
ಬೆನ್ನಲ್ಲೇ ಇರಿಯದಿರು ಓ ಜಾಣ ನೆನಪೇ ||

                                                    - ಕೆ. ಎಸ್. ನಿಸಾರ್ ಅಹಮದ್ 

ಹುಚ್ಚು ಖೋಡಿ ಮನಸು !! / Hucchu khodi manasu

ರಚನೆ : ಹೆಚ್.ಎಸ್. ವೆಂಕಟೇಶ ಮೂರ್ತಿ  

ಹುಚ್ಚು ಖೋಡಿ ಮನಸು 
ಅದು ಹದಿನಾರರ ವಯಸು 
ಮಾತು ಮಾತಿಗೇಕೋ ನಗು 
ಮರುಘಳಿಗೇ ಮೌನ,
ಕನ್ನಡಿ ಮುಂದಷ್ಟು ಹೊತ್ತು 
ಬರೆಯದಿರುವ ಕವನ ||
ಸೆರಗು ತೀಡಿದಷ್ಟು ಸುಕ್ಕು 
ಹಠ ಮಾಡುವ ಕೂದಲು 
ನಿರಿ ಏಕೋ ಸರಿಯಾಗದು 
ಮತ್ತೆ ಒಳಗೆ ಹೋದಳು ||
ಕೆನ್ನೆ ಕೊಂಚ ಕೆಂಪಾಯಿತೆ
ತುಟಿಯ ರಂಗು ಹೆಚ್ಚೇ 
ನಗುತ ಅವಳ ಛೇಡಿಸುತಿದೆ 
ಗಲ್ಲದ ಕರಿ ಮಚ್ಚೆ ||
ಬರಿ ಹಸಿರು ಬರಿ ನೋವು 
ಎದೆಯೊಳೆಷ್ಟು ಹೆಸರು 
ಯಾರ ಮದುವೆ ದಿಬ್ಬಣವೋ
ಸುಮ್ಮನೆ ನಿಟ್ಟುಸಿರು ||

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ / Amma nanu devaraane benne kaddillamma

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ

ನೀನೆ ನೋಡು ಬೆಣ್ಣೆಗಡಿಗೆ ಸೂರಿನ ನೆಲುವಲ್ಲಿ
ಹೇಗೆ ತಾನೇ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ ||

ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತಾ
ಬೆಣ್ಣೆ ಒರೆಸಿದ ಕೈಯ ಬೆನ್ನ ಹಿಂದೆ ಮರೆಸುತ್ತಾ ||

ಎತ್ತಿದ ಕೈಯ ಕಡಗೋಲನ್ನು ಮೂಲೆಲಿಟ್ಟು ನಕ್ಕಳು ಗೋಪಿ
ಸೂರದಾಸ ಪ್ರಿಯಶಾಮನ ಶಾಮನ
ಸೂರದಾಸ ಪ್ರಿಯಶಾಮನ ಶಾಮನ ಮುತ್ತಿಟ್ಟು ನಕ್ಕಳು ಗೋಪಿ ||

                                                                          - ಹೆಚ್. ಎಸ್. ವೆಂಕಟೇಶ ಮೂರ್ತಿ
--------------------------------------------------------------------------------------------------------

Amma naanu devaraane benne kaddillamma

Amma naanu devaraane benne kaddillamma
ella seri nanna baayige benneya mettidaramma ||

neene nodu bennegadige soolina neluvalli
hege taane tegeyali amma nanna putta kaigalalli ||

shaama helida benne mettida tanna baayi oresuttaa
benne oresida kaiya benna hinde maresuttaa ||

Ettida kaiya kadagolannu moolelittu nakkalu gopi
sooradaasa priyashaamana shaamana
sooradaasa priya shaamana muttittu nakkalu gopi ||

~Madhura Haadugalu~: ರೆಕ್ಕೆ ಇದ್ದರೆ ಸಾಕೆ...

~Madhura Haadugalu~: ರೆಕ್ಕೆ ಇದ್ದರೆ ಸಾಕೆ...: - ಎಚ್. ಎಸ್. ವೆಂಕಟೇಶಮೂರ್ತಿ  ರೆಕ್ಕೆ ಇದ್ದರೆ ಸಾಕೆ? ಹಕ್ಕಿಗೆ ಬೇಕು ಬಾನು  ಬಯಲಲಿ ತೇಲುತ ತಾನು  ಮ್ಯಾಲೆ ಹಾರೋಕೆ।। ಕಲೊಂದಿದ್ದರೆ ಸಾಕೆ? ಚಿಗರೆಗೆ ಬೇಕು ಕಾನು...

ಬಾ ಇಲ್ಲಿ ಸಂಭವಿಸು / baa illi sambhavisu

ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ*,
ನಿತ್ಯವೂ ಅವತರಿಪ ಸತ್ಯಾವತಾರ!
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿ, ಓ ಭವವಿದೂರ.

ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ, ಬಾರ!
ಮೂಡಿ ಬಂದಿಂದೆನ್ನ ನರರೂಪ ಚೇತನದಿ
ನಾರಾಯಣತ್ವಕ್ಕೆ ದಾರಿ ತೋರ!

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ,
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,
ದೇಶದೇಶದಿ ವೇಷವೇಷಾಂತರವನಾಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ,

ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ,
ಹೇ ದಿವ್ಯ ಸಚ್ಚಿದಾನಂದ ಶೀಲ!

                                                                  - ಕುವೆಂಪು 

* ಇದು ಮೂಲ ಕವನದ ಸಾಲು. ತಾಳ, ಲಯವನ್ನು ಹೊಂದಿಸಲು ಅಶ್ವಥ್ ರವರು ಇದನ್ನೇ "ಬಾ ಇಲ್ಲಿ ಸಂಭವಿಸು" ಎಂದು ಬದಲಿಸಿಕೊಂಡಿದ್ದಾರೆ.