Monday, 30 January 2012

Nagara Panchami / Panchami Habba / ನಾಗರ ಪಂಚಮಿ ಹಬ್ಬ

Nagara Panchami / Panchami Habba / ನಾಗರ ಪಂಚಮಿ ಹಬ್ಬ


ನಾಗರ ಪಂಚಮಿ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಈ ಹಬ್ಬವನ್ನು ಪಂಚಮಿ ಹಬ್ಬ, ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬದಲ್ಲಿ ನಾಗಪ್ಪ / ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂ ಆಚರಿಸುತ್ತಾರೆ.
ಬೆಳಿಗ್ಗೆ ಮಂಗಳ ಸ್ನಾನ ಮಾಡಬೇಕು. ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡಬೇಕು. ದೇವರ ಮನೆಯಲ್ಲಿ ಹುತ್ತದ ಮಣ್ಣಿನಿಂದ ಹಾವಿನ ಆಕಾರ ಮಾಡಿಇಟ್ಟುಕೊಳ್ಳಬಹುದು ಅಥವಾ ಬೆಳ್ಳಿ ನಾಗಪ್ಪನ ವಿಗ್ರಹ ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಪಟ ಇದ್ದೇ ಇರುತ್ತೆ. ಇದನ್ನೂ ಜೊತೆಯಲ್ಲಿ ಇಟ್ಟು ಪೂಜೆ ಮಾಡಬಹುದು. ಕೆಲವರು ಹಾವಿನಾಕಾರದ ರಂಗೋಲಿಯನ್ನು ಬರೆಯುತ್ತಾರೆ. ನಾಗಪ್ಪನಿಗೆ ಹಾಲು, ನೀರಿನಿಂದ ತನಿ ಎರೆಯುತ್ತಾರೆ. ಸಾಮಾನ್ಯವಾಗಿ ತಾಳೆ ಗಿಡದ ಎಲೆ/ಹೂವನ್ನು ಉಪಯೋಗಿಸಿ ತನಿ ಎರೆಯುತ್ತಾರೆ. ತಾಳೆ ಗಿಡದ ಚಿತ್ರ ಕೆಳಗಿದೆ.
click on image to enlarge

ಮಂತ್ರಾಕ್ಷತೆ ಉಪಯೋಗಿಸುವುದಿಲ್ಲ . ಅದರ ಬದಲು ಅಕ್ಕಿ ಹಿಟ್ಟು, ಕಡಲೆ ಕಾಳು ಸೇರಿಸಿದ ಮಿಶ್ರಣ ಉಪಯೋಗಿಸುತ್ತಾರೆ.
ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ.

ನೈವೇದ್ಯಕ್ಕೆ ಚಿಗಳಿ ( ಎಳ್ಳು ಮತ್ತು ಬೆಲ್ಲ ಸೇರಿಸಿ ಮಾಡುವ ಸಿಹಿ ತಿನಿಸು) ತಂಬಿಟ್ಟು ( ಅಕ್ಕಿ, ಬೆಲ್ಲ ಸೇರಿಸಿ ಮಾಡುವ ಸಿಹಿ ತಿನಿಸು) ಮಾಡುತ್ತಾರೆ. ಪೂಜೆಯ ನಂತರ ದೇವರ ಮುಂದೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುತ್ತಾರೆ. ಅಣ್ಣ , ಅಕ್ಕನಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ.

ನಾಗರ ಪಂಚಮಿ ಹಬ್ಬದ ವಿಶೇಷತೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುವುದು. ಅಕ್ಕ, ತಂಗಿ, ಅಣ್ಣ ತಮ್ಮ ಒಬ್ಬರಿಗೊಬ್ಬರು ತನಿ ಎರೆಯುತ್ತಾರೆ. ಹಾಲನ್ನು ಹೊಟ್ಟೆ ಬೆನ್ನಿಗೆ ಸವರಿ , ಹೊಟ್ಟೆ ಬೆನ್ನು ತಂಪಾಗಿರಲಿ ಅಂತ ಹಾರೈಸುತ್ತಾರೆ. ಹೊಟ್ಟೆ ಎಂದರೆ - ಮುಂದೆ ಬರುವ ಪೀಳಿಗೆ, ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತ , ಬೆನ್ನು ಎಂದರೆ ಹಿಂದಿನಪೀಳಿಗೆ ಅಂದ್ರೆ ನಮ್ಮ ಹಿರಿಯರು ಎಂಬ ಸಂಕೇತ. ಒಡಹುಟ್ಟಿದವರು ಮತ್ತು ಅವರ ಮಕ್ಕಳು ಎಲ್ಲರು ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಹೀಗಾಗಿ ಇದನ್ನು ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಊಟಕ್ಕೆ ಕಾಯಿ ಕಡುಬು, ಉದ್ದಿನ ಕಡುಬು ಮಾಡುತ್ತಾರೆ. ನಾಗಪ್ಪನಿಗೆ ಘಾಟು ಆಗಬಾರದೆಂದು ಯಾವುದೇ ಕರಿದ ತಿಂಡಿ ಮಾಡುವುದಿಲ್ಲ, ಅಡಿಗೆಗೆ ಒಗ್ಗರಣೆ ಹಾಕುವುದಿಲ್ಲ.


ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನಿಗೆ ಹಾಲೆರೆದು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ.
ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಪಂಚಮಿ ಹಬ್ಬ ಎನ್ನುತ್ತಾರೆ. ಇದನ್ನು ಅದ್ಧೂರಿಯಿಂದ ಮಾಡುತ್ತಾರೆ. ೩ - ೫ ದಿನಗಳ ಹಬ್ಬ ನಡೆಸುತ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ಅಣ್ಣ/ತಮ್ಮ ಅತ್ತೆ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗಲು ಬರುತ್ತಾರೆ. ಇದೇ ಪದ್ಧತಿ ಬಗ್ಗೆ ಒಂದು ಜನಪ್ರಿಯವಾದ ಭಾವಗೀತೆ ಕೂಡ ಇದೆ. ಕವಿಯಾದ ಬೆಟಗೇರಿ ಕೃಷ್ಣ ಶರ್ಮ (ಆನಂದಕಂದರು) ರಚಿಸಿರುವ "ಪಂಚಮಿ ಹಬ್ಬಕ್ ಉಳಿದಾವು ದಿನ ನಾಕ ಅಣ್ಣ ಬರಲಿಲ್ಲ ಯಾಕೋ ಕರಿಯಾಕ " ಹಾಡನ್ನು ಇಲ್ಲಿ ಕೇಳಬಹುದು. ಹೆಣ್ಣು ಮಕ್ಕಳು ಪಂಚಮಿ ಹಬ್ಬವನ್ನು ತವರು ಮನೆಗೆ ಹೋಗಿ ಆಚರಿಸುತ್ತಾರೆ. ಒಡಹುಟ್ಟಿದವರಿಗೆ ಹಾಲು ಎರೆದು ಉಡುಗೊರೆ ಕೊಡುತ್ತಾರೆ. ಇದಕ್ಕೆ ಉಂಡಿ /ಉಂಡೆ ಹಬ್ಬ ಎಂದೂ ಹೆಸರು. ವಿವಿಧವಾದ ಉಂಡೆಗಳನ್ನು ಮಾಡುತ್ತಾರೆ . ಜೋಕಾಲಿ ಕಟ್ಟಿ ಆಟ ಆಡುತ್ತಾರೆ. ಹೀಗೆ ಸಂಬ್ರಮದಿಂದ ಹಬ್ಬ ಮಾಡುತ್ತಾರೆ. ಕರ್ನಟಾಕದಲ್ಲೇ ಅಲ್ಲ, ಇಡೀ ಭಾರತ ದೇಶದಲ್ಲಿ ನಾಗ ಪಂಚಮಿ ಆಚರಿಸುತ್ತಾರೆ.
Useful Links:
Subramanya Ashottara
Subramanya Stotram

Subramanya Bhujangam


Subrahmanya Ashtaka

Subrahmanya Sahasranamavali below


Subramanya Songs by VidyaBhushana:
  1. Bandu Nodiro Shree Subramanya
  2. Subbaraya Shubhakaya
  3. Subrahmanya Suragraganya
  4. Subramanya Subramanya

No comments:

Post a Comment